140 ಕೋಟಿ ಭಾರತೀಯರ ಕನಸುಗಳ ಪ್ರತಿಬಿಂಬವೇ 2026ರ ಬಜೆಟ್: ಪ್ರಧಾನಿ ಮೋದಿ ಶ್ಲಾಘನೆ

Untitled design 2026 02 01T142336.974

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026–27ನೇ ಸಾಲಿನ ಕೇಂದ್ರ ಬಜೆಟ್‌ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಈ ಬಜೆಟ್‌ನ್ನು 140 ಕೋಟಿ ಭಾರತೀಯರ ಆಕಾಂಕ್ಷೆಗಳ ಪ್ರತಿಬಿಂಬವೆಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಇದು ಸುಧಾರಣಾ ಹಾದಿಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ‘ವಿಕಸಿತ ಭಾರತ’ದ ಗುರಿಯತ್ತ ದೇಶವನ್ನು ಮುನ್ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ಕುರಿತಂತೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಬಜೆಟ್ ಭಾರತದ ಭವಿಷ್ಯದ ಕನಸುಗಳನ್ನು ಸಾಕಾರಗೊಳಿಸುವ ಶಕ್ತಿಯನ್ನು ಹೊಂದಿದೆ. ಇದು ಅಭಿವೃದ್ಧಿಗೆ ಹೊಸ ಸ್ಪರ್ಶ ನೀಡುವ ಜೊತೆಗೆ, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪಿಸುವ ಸ್ಪಷ್ಟ ಮಾರ್ಗಸೂಚಿಯಾಗಿದೆ” ಎಂದು ಹೇಳಿದರು.

ಸತತ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, “ನಿರ್ಮಲಾ ಸೀತಾರಾಮನ್ ಹಾಗೂ ಅವರ ತಂಡ ದೇಶದ ಅಭಿವೃದ್ಧಿಗಾಗಿ ದೂರದೃಷ್ಟಿಯ ಬಜೆಟ್ ನೀಡಿದೆ. ಇದು ಪ್ರಸ್ತುತ ಅಗತ್ಯಗಳ ಜೊತೆಗೆ ಭವಿಷ್ಯದ ಸವಾಲುಗಳನ್ನೂ ಗಮನದಲ್ಲಿಟ್ಟುಕೊಂಡಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಿರುವುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆಯ ಉದ್ದೇಶದಿಂದ ಹಲವಾರು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಇದರಿಂದ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಇನ್ನಷ್ಟು ಬಲವಾಗಲಿದೆ ಎಂದು ಅವರು ಹೇಳಿದರು.

ಯುವ ಪೀಳಿಗೆಗೆ ಇದು ‘ಯುವಶಕ್ತಿ ಬಜೆಟ್’ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಕೌಶಲ್ಯಾಭಿವೃದ್ಧಿ, ಉದ್ಯೋಗ ಸೃಷ್ಟಿ, ಸ್ಟಾರ್ಟ್‌ಅಪ್‌ಗಳು ಹಾಗೂ ಉದ್ಯಮಶೀಲತೆಗೆ ಈ ಬಜೆಟ್‌ ವಿಶೇಷ ಬೆಂಬಲ ನೀಡುತ್ತದೆ ಎಂದರು. ಖೇಲೋ ಇಂಡಿಯಾ ಯೋಜನೆಯ ಮೂಲಕ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದ್ದು, ಕ್ರೀಡಾ ಕ್ಷೇತ್ರದಲ್ಲೂ ಭಾರತ ಜಾಗತಿಕ ಮಟ್ಟದಲ್ಲಿ ಮಿಂಚಲು ಸಹಕಾರಿಯಾಗಲಿದೆ ಎಂದರು.

‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಈ ಬಜೆಟ್ ಹೊಸ ಚೈತನ್ಯ ನೀಡಿದೆ ಎಂದು ಹೇಳಿದ ಪ್ರಧಾನಿ, ಎಂಎಸ್‌ಎಂಇ ಕ್ಷೇತ್ರ, ಟೆಕ್ಸ್ಟೈಲ್ ಉದ್ಯಮ, ಸೆಮಿಕಂಡಕ್ಟರ್ 2.0, ಬಯೋ-ಫಾರ್ಮಾ ಯೋಜನೆಗಳು ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲಿವೆ ಎಂದರು. ಇದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಿ ಆರ್ಥಿಕತೆ ಮತ್ತಷ್ಟು ಬಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತವನ್ನು ಡೇಟಾ ಸೆಂಟರ್ ಹಬ್ ಆಗಿ ರೂಪಿಸುವ ದೃಷ್ಟಿಯಿಂದ ಈ ಬಜೆಟ್ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಕೃಷಿ ಕ್ಷೇತ್ರದ ವಿಷಯದಲ್ಲಿ ಮಾತನಾಡಿದ ಪ್ರಧಾನಿ, ತೆಂಗಿನ ಬೆಳೆ ಸೇರಿದಂತೆ ಹಲವು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಒತ್ತು ನೀಡಿರುವುದನ್ನು ಶ್ಲಾಘಿಸಿದರು.

ವಿತ್ತೀಯ ಶಿಸ್ತು ಹಾಗೂ ಕೊರತೆ ನಿಯಂತ್ರಣದ ವಿಷಯದಲ್ಲೂ ಈ ಬಜೆಟ್ ಸಮತೋಲನ ಕಾಯ್ದುಕೊಂಡಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. “ಅಭಿವೃದ್ಧಿ ಮತ್ತು ವಿತ್ತೀಯ ಶಿಸ್ತು – ಎರಡನ್ನೂ ಸಮಾನವಾಗಿ ಸಾಧಿಸುವ ಪ್ರಯತ್ನ ಈ ಬಜೆಟ್‌ನಲ್ಲಿ ಕಾಣುತ್ತದೆ” ಎಂದು ಹೇಳಿದರು.

Exit mobile version