ಇಸ್ರೇಲ್ ಸಂಸತ್ತಿನ ಅತ್ಯುನ್ನತ ಗೌರವ ಪಡೆದ ಅಪರೂಪದ ನಾಯಕ ಪ್ರಧಾನಿ ಮೋದಿ

Untitled design 2026 02 26T132513.347

ಜೆರೂಸಲೇಂ/ನವದೆಹಲಿ, ಫೆ. 27: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಹಾಗೂ ಪಾಲೆಸ್ತೀನ್ ಎರಡೂ ರಾಷ್ಟ್ರಗಳಿಂದ ಅತ್ಯುನ್ನತ ಗೌರವಗಳನ್ನು ಪಡೆದ ಅಪರೂಪದ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಇಸ್ರೇಲ್ ಗೆ ಎರಡನೇ ಬಾರಿ ಭೇಟಿ ನೀಡಿರುವ ಪ್ರಧಾನಿ ಮೋದಿ ಅವರಿಗೆ ಬುಧವಾರ ಇಸ್ರೇಲ್ ಸಂಸತ್ತಿನ (ನೆಸ್ಸೆಟ್) ಅತ್ಯುನ್ನತ ಪುರಸ್ಕಾರವಾದ ‘ಸ್ಪೀಕರ್ ಆಫ್ ದಿ ನೆಸ್ಸೆಟ್ ಪದಕ’ ನೀಡಿ ಗೌರವಿಸಲಾಯಿತು. ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಬಲಪಡಿಸುವಲ್ಲಿ ಅವರ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ನೆಸ್ಸೆಟ್ ಸ್ಪೀಕರ್ ಅಮೀರ್ ಒಹಾನಾ ಅವರು ಪ್ರಧಾನಿಗೆ ಈ ಪದಕವನ್ನು ಸಮಾರಂಭದಲ್ಲಿ ನೀಡಿದರು. ಮೋದಿ ಅವರು ನೆಸ್ಸೆಟ್ ಸಭಾಂಗಣದಲ್ಲಿ ಭಾಷಣ ಮಾಡುವ ಮೊದಲು ಸಂಸದರಿಂದ ಸ್ವಾಗತ ಲಭಿಸಿತು. ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದ ಮೊದಲ ಭಾರತೀಯ ನಾಯಕ ಎಂಬ ಗೌರವವೂ ಅವರಿಗೆ ಸೇರಿದೆ.

ಈ ಗೌರವವನ್ನು ಸ್ವೀಕರಿಸಿದ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಮೋದಿ, “ನೆಸ್ಸೆಟ್ ಪದಕ ಸ್ವೀಕರಿಸುವುದು ನನಗೆ ಮಹತ್ತರ ಗೌರವ. ಇದು ಭಾರತ ಮತ್ತು ಇಸ್ರೇಲ್ ನಡುವಿನ ಶಾಶ್ವತ ಸ್ನೇಹಕ್ಕೆ ಸಲ್ಲುವ ಸನ್ಮಾನ” ಎಂದು ತಿಳಿಸಿದ್ದಾರೆ. ನಮ್ಮ ದೇಶಗಳನ್ನು ಮಾರ್ಗದರ್ಶನ ಮಾಡುವ ಹಂಚಿಕೆಯ ಮೌಲ್ಯಗಳ ಪ್ರತಿಬಿಂಬವೇ ಈ ಗೌರವ ಎಂದು ಅವರು ಹೇಳಿದ್ದಾರೆ.

ಮೋದಿಗೆ 2018ರಲ್ಲಿ ಪಾಲೆಸ್ತೀನ್ ಸರ್ಕಾರವು ವಿದೇಶಿ ನಾಯಕರಿಗೆ ನೀಡುವ ಅತ್ಯುನ್ನತ ಗೌರವವಾದ  ‘ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪಾಲೆಸ್ತೀನ್’ ಅನ್ನು ಪ್ರಧಾನಿಗೆ ನೀಡಿತ್ತು. ಇದರಿಂದ ಇಸ್ರೇಲ್ ಮತ್ತು ಪಾಲೆಸ್ತೀನ್ ಎರಡೂ ದೇಶಗಳಿಂದ ಉನ್ನತ ಪ್ರಶಸ್ತಿ ಪಡೆದ ಅಪರೂಪದ ನಾಯಕರೆಂಬ ಖ್ಯಾತಿ ಅವರಿಗೆ ದೊರಕಿದೆ.

ನೆಸ್ಸೆಟ್‌ನಲ್ಲಿ ಮಾತನಾಡಿದ ಮೋದಿ, ಭಯೋತ್ಪಾದನೆ ವಿಶ್ವ ಶಾಂತಿಗೆ ಗಂಭೀರ ಬೆದರಿಕೆ ಎಂದು ಹೇಳಿದ್ದಾರೆ. ಗಾಜಾದಲ್ಲಿ ಶಾಂತಿ ಸ್ಥಾಪನೆಗಾಗಿ ಭಾರತ ನಿರಂತರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. 2023ರಲ್ಲಿ ಹಮಾಸ್ ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ಭಾರತದ ಸಂತಾಪವನ್ನು ವ್ಯಕ್ತಪಡಿಸಿದ ಅವರು, “ನಿಮ್ಮ ನೋವು ನಮ್ಮದು” ಎಂದು ಸಹಾನುಭೂತಿ ವ್ಯಕ್ತಪಡಿಸಿದರು.

ಭಾರತವೂ ದೀರ್ಘಕಾಲದಿಂದ ಭಯೋತ್ಪಾದನೆಯ ನೋವನ್ನು ಅನುಭವಿಸಿದೆ ಎಂದು ಹೇಳಿದ ಪ್ರಧಾನಿ, 26/11 ಮುಂಬೈ ದಾಳಿಯನ್ನು ನೆನಪಿಸಿಕೊಂಡರು. ನಾಗರಿಕರ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲಾಗುವುದಿಲ್ಲ. ಭಯೋತ್ಪಾದನೆಗೆ ಶೂನ್ಯ ಸಹಿಷ್ಣುತೆ ಎಂಬ ನೀತಿಯನ್ನು ಭಾರತ ಕಟ್ಟುನಿಟ್ಟಾಗಿ ಅನುಸರಿಸುತ್ತದೆ ಎಂದು ಅವರು ಹೇಳಿದರು.

ಇಸ್ರೇಲ್‌ನಂತೆ ಭಾರತವೂ ಭದ್ರತೆ ಮತ್ತು ಶಾಂತಿಯ ವಿಚಾರದಲ್ಲಿ ದೃಢ ನಿಲುವು ಹೊಂದಿದೆ. ಜಾಗತಿಕ ಮಟ್ಟದಲ್ಲಿ ಸಮನ್ವಿತ ಕ್ರಮಗಳ ಮೂಲಕವೇ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ಎದುರಿಸಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು. ಶಾಶ್ವತ ಶಾಂತಿ ಹಾಗೂ ಪ್ರಾದೇಶಿಕ ಸ್ಥಿರತೆಗೆ ಭಾರತ ತನ್ನ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಮೋದಿ ಸ್ಪಷ್ಟಪಡಿಸಿದರು.

Exit mobile version