ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣಾ ರಣರಂಗದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರ ಸರಳತೆಯ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ರಸ್ತೆಯ ಬದಿಯ ಒಬ್ಬ ಬಡ ಚಿರುಮುರಿ ವ್ಯಾಪಾರಿಯ ಅದೃಷ್ಟವನ್ನು ಪ್ರಧಾನಿಯವರ ಅನಿರೀಕ್ಷಿತ ಭೇಟಿ ರಾತ್ರೋರಾತ್ರಿ ಬದಲಾಯಿಸಿದೆ. ಈ ವ್ಯಾಪಾರಿಯ ಹೆಸರು ವಿಕ್ರಮ್, ಮೂಲತಃ ಬಿಹಾರದ ನಿವಾಸಿ, ಈಗ ಕೋಲ್ಕತ್ತಾದ ಒಂದು ಸಣ್ಣ ಅಂಗಡಿಯಲ್ಲಿ ಚುರುಮುರಿ ಮಾರಿ ಜೀವನ ಸಾಗಿಸುತ್ತಿದ್ದಾರೆ.
ಯಾರು ಈ ವಿಕ್ರಮ್?
ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿರುವ ವಿಕ್ರಮ್ ಅವರ ಬದುಕಿನಲ್ಲಿ ದೊಡ್ಡ ದುರಂತಗಳ ಸಾಲೇ ಇದೆ. ಬಡತನದ ಕಾರಣಕ್ಕೆ ಉನ್ನತ ಶಿಕ್ಷಣವನ್ನು ಕನಸಿನಲ್ಲೂ ಕಾಣಲಾಗದ ಅವರು, ದಿನಕ್ಕೆ ಸುಮಾರು ಸಾವಿರ ರೂಪಾಯಿ ಗಳಿಸಿ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಅವರ ಅಂಗಡಿ ಎಷ್ಟು ಸಣ್ಣದೆಂದರೆ, ಕೆಲವೇ ಗ್ರಾಹಕರು ಬಂದು ಹೋಗುವಷ್ಟು ಮಾತ್ರ ಚಿಕ್ಕದಾಗಿದೆ. ಆದರೆ ಪ್ರಧಾನಿ ಮೋದಿ ಅವರ ಆಗಮನದ ನಂತರ ಅವರ ಬದುಕಿನ ಪುಟ ತಿರುಗಿಬಿಟ್ಟಿದೆ.
ಪ್ರಧಾನಿ ಜೊತೆಗಿನ 10 ನಿಮಿಷಗಳು
ವಿಕ್ರಮ್ ಅವರು ಪ್ರಧಾನಿ ಮೋದಿ ಜೊತೆಗಿನ ಸಂವಾದದ ಬಗ್ಗೆ ಮಾತನಾಡಿದ್ದು, “ನಾನು ಕನಸಿನಲ್ಲೂ ಅವರು ನನ್ನ ಅಂಗಡಿಗೆ ಬರುತ್ತಾರೆ ಎಂದು ಭಾವಿಸಿರಲಿಲ್ಲ. ನನ್ನ ಹೆಸರು ಕೇಳಿದಾಗ ವಿಕ್ರಮ್ ಎಂದೆ. ‘ಚುರುಮುರಿ ಎಷ್ಟು?’ ಎಂದು ಕೇಳಿದಾಗ 10 ರೂಪಾಯಿ ಎಂದು ನಡುಗುವ ಧ್ವನಿಯಲ್ಲಿ ಹೇಳಿದೆ. ಪ್ರಧಾನಿಯವರು ನನ್ನನ್ನು ಪ್ರೀತಿಯಿಂದ ಕುಶಲೋಪಚಾರ ಕೇಳಿದರು. ನಾನು ಬೇಡ ಎಂದರೂ ಅವರು 10 ರೂಪಾಯಿ ತೆಗೆದುಕೊಳ್ಳಲೇಬೇಕೆಂದು ಹಣವನ್ನು ನನ್ನ ಕೈಯಲ್ಲಿಟ್ಟರು. ಅವರ ಮಾತುಕತೆಯಲ್ಲಿ ಎಲ್ಲೂ ಅಹಂಕಾರವಿರಲಿಲ್ಲ, ಕೇವಲ ಸ್ನೇಹಭಾವವಿತ್ತು.” ಎಂದು ಹೇಳಿಕೊಂಡಿದ್ದಾರೆ.
ಪ್ರಧಾನಿ ಅವರು, ವಿಕ್ರಮ್ ಅವರ ತಂದೆ ಉತ್ತಮ್ ಹಾಗೂ ತಾಯಿ ಸುನಿತಾ ಅವರ ಆರೋಗ್ಯವನ್ನೂ ವಿಚಾರಿಸಿದರು. ಅವರ ಕಷ್ಟದ ಬದುಕಿನ ಬಗ್ಗೆ ಸಹಾನುಭೂತಿ ತೋರಿದರು. ಇದೆಲ್ಲದರ ನಡುವೆಯೂ ರಾಜಕೀಯದ ಒಂದು ಮಾತನ್ನೂ ಅವರು ಆಡಲಿಲ್ಲ ಎಂದು ವಿಕ್ರಮ್ ಸ್ಪಷ್ಟಪಡಿಸಿದ್ದಾರೆ. ಈ ಸಂವಾದ ಕೇವಲ 10 ನಿಮಿಷಗಳ ಕಾಲ ನಡೆದರೂ, ಅದು ವಿಕ್ರಮ್ ಅವರ ಜೀವನವನ್ನು ಪೂರ್ತಿ ಬದಲಾಯಿಸಿತು.
ಆಟೋಗ್ರಾಫ್ ಮರೆತ ವಿಕ್ರಮ್
ತಮ್ಮ ಸಂಭ್ರಮದಲ್ಲೇ ಪ್ರಧಾನಿಯವರ ಸಹಿ ಪಡೆಯಲು ಮರೆತುಹೋದೆ ಎಂಬ ಬೇಸರವನ್ನು ವಿಕ್ರಮ್ ವ್ಯಕ್ತಪಡಿಸಿದ್ದಾರೆ. “ಅಷ್ಟೊಂದು ದೊಡ್ಡ ವ್ಯಕ್ತಿಯನ್ನು ಎದುರಿಸಿದಾಗ ಎಲ್ಲವೂ ಮರೆತುಹೋಯಿತು. ನಾನು ಆಟೋಗ್ರಾಫ್ ಕೇಳಬೇಕಿತ್ತು. ಅದೊಂದೇ ನನ್ನ ಕೊರಗು,” ಎಂದು ಅವರು ಹೇಳಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿಕ್ರಮ್ ಅವರ ಚುರುಮುರಿ ಅಂಗಡಿಗೆ ಗ್ರಾಹಕರ ದಂಡೇ ಹರಿದುಬರುತ್ತಿದೆ. ಸ್ಥಳೀಯ ಮಾಧ್ಯಮಗಳಿಂದ ಹಿಡಿದು ರಾಷ್ಟ್ರೀಯ ವಾಹಿನಿಗಳವರೆಗೆ ಎಲ್ಲೆಡೆ ವಿಕ್ರಮ್ ಅವರ ಮುಗ್ಧ ಮುಖವೇ ಕಾಣಿಸಿಕೊಳ್ಳುತ್ತಿದೆ. ಒಬ್ಬ ಸಾಮಾನ್ಯ ವ್ಯಾಪಾರಿ ಅನಿರೀಕ್ಷಿತವಾಗಿ ಸೆಲೆಬ್ರಿಟಿಯಾದ ಕಥೆ ಇದಾಗಿದೆ. ಪ್ರಧಾನಿ ಮೋದಿಯವರ ಈ ಸರಳತೆಯನ್ನು ಜನರು ಮನಸಾರೆ ಮೆಚ್ಚಿಕೊಂಡಿದ್ದಾರೆ.
