ಕ್ವಾಲಾಲಂಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಫೆಬ್ರವರಿ 7) ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರಕ್ಕೆ ಆಗಮಿಸಿದ್ದು, ಅವರಿಗೆ ಅಲ್ಲಿನ ಸರ್ಕಾರದಿಂದ ಅಭೂತಪೂರ್ವ ಸ್ವಾಗತ ಲಭಿಸಿದೆ. ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಶಿಷ್ಟಾಚಾರವನ್ನು ಬದಿಗಿಟ್ಟು ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿ ಅವರನ್ನು ಬರಮಾಡಿಕೊಂಡಿದ್ದಾರೆ.
ಪ್ರಧಾನಿ ಮೋದಿ ವಿಮಾನದಿಂದ ಇಳಿಯುತ್ತಿದ್ದಂತೆ ರೆಡ್ ಕಾರ್ಪೆಟ್‌ನಲ್ಲಿ ಸ್ವಾಗತ ನೀಡಲಾಯಿತು. ಉಭಯ ದೇಶಗಳ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯ ಪ್ರದರ್ಶನಗಳು ಗಮನ ಸೆಳೆದವು. ಮಲೇಷ್ಯಾದ ಮಾನವ ಸಂಪನ್ಮೂಲ ಸಚಿವ ರಮಣನ್ ರಾಮಕೃಷ್ಣನ್ ಮತ್ತು ವಿದೇಶಾಂಗ ಉಪ ಸಚಿವ ಲುಕಾನಿಸ್ಮನ್ ಬಿನ್ ಅವಾಂಗ್ ಸೌನಿ ಅವರು ಈ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷವೆಂದರೆ, ವಿಮಾನ ನಿಲ್ದಾಣದಿಂದ ಭಾರತೀಯ ಸಮುದಾಯದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಎರಡೂ ದೇಶಗಳ ಪ್ರಧಾನಿಗಳು ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
A grand celebration of Indian culture in Malaysia!
A highlight of the community programme in Kuala Lumpur was a dance performance which has set a record in Malaysia.
Congratulations to all those who took part in the dance performance. pic.twitter.com/BbXhNKuRez
— Narendra Modi (@narendramodi) February 7, 2026
ತಮ್ಮ ಭೇಟಿಯ ಬಗ್ಗೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ‘X’ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ನನ್ನ ಆತ್ಮೀಯ ಸ್ನೇಹಿತ ಅನ್ವರ್ ಇಬ್ರಾಹಿಂ ಅವರ ಸ್ವಾಗತದಿಂದ ನಾನು ಮನತುಂಬಿ ಬಂದಿದ್ದೇನೆ. ಭಾರತ ಮತ್ತು ಮಲೇಷ್ಯಾ ನಡುವಿನ ಜನರ ಸಂಬಂಧವನ್ನು ನಾವು ಸಂಭ್ರಮಿಸುತ್ತಿದ್ದೇವೆ. ಈ ಭೇಟಿಯು ನಮ್ಮ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ 8 ರಂದು (ನಾಳೆ) ಉಭಯ ನಾಯಕರು ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ವ್ಯಾಪಾರ, ಹೂಡಿಕೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೊಸ ಒಪ್ಪಂದಗಳು ಏರ್ಪಡುವ ಸಾಧ್ಯತೆಯಿದೆ. ಆದರೆ, ಈ ಭೇಟಿಯ ಅತ್ಯಂತ ಪ್ರಮುಖ ಅಂಶವೆಂದರೆ ಭಾರತಕ್ಕೆ ಬೇಕಾಗಿರುವ ವಿವಾದಿತ ಇಸ್ಲಾಮಿಕ್ ಬೋಧಕ ಜಾಕಿರ್ ನಾಯ್ಕ್ ಹಸ್ತಾಂತರದ ವಿಚಾರ. ಭಾರತದಲ್ಲಿ ದ್ವೇಷ ಭಾಷಣ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ನಾಯ್ಕ್ ಸದ್ಯ ಮಲೇಷ್ಯಾದಲ್ಲಿ ಆಶ್ರಯ ಪಡೆದಿದ್ದಾನೆ. ಈ ಬಾರಿ ಭಾರತವು ಹಸ್ತಾಂತರ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಮಲೇಷ್ಯಾ ಮೇಲೆ ಒತ್ತಡ ಹೇರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
