ಜಕಾರ್ತಾ, (ಜುಲೈ 8): ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಪ್ರವಾಸದ ವೇಳೆ ಜಕಾರ್ತಾದಲ್ಲಿ ಮಹತ್ವದ ಘೋಷಣೆ ಹೊರಬಿದ್ದಿದೆ. ಇಂಡೋನೇಷ್ಯಾದಲ್ಲಿರುವ ಸುಮಾರು 1,000 ವರ್ಷಗಳ ಇತಿಹಾಸ ಹೊಂದಿರುವ ಪ್ರಂಬನನ್ ಶಿವ ದೇವಾಲಯದ ಜೀರ್ಣೋದ್ಧಾರ ಮತ್ತು ಸಂರಕ್ಷಣೆಗೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
- ಪ್ರಂಬನನ್ ಶಿವ ದೇವಾಲಯದ ಜೀರ್ಣೋದ್ಧಾರಕ್ಕೆ ಭಾರತ ಬೆಂಬಲ
- ಪ್ರಂಬನನ್ ದೇವಾಲಯ 9ನೇ ಶತಮಾನದ, ಸುಮಾರು 1,000 ವರ್ಷ ಹಳೆಯ ಐತಿಹಾಸಿಕ ಹಿಂದೂ ದೇವಾಲಯ
- ದೇವಾಲಯವು ಜಾವಾ ದ್ವೀಪದಲ್ಲಿ ನೆಲೆಗೊಂಡಿದ್ದು, ಯುನೆಸ್ಕೋ ವಿಶ್ವ ಪರಂಪರೆ ತಾಣ
- ದೇವಾಲಯದ ಗೋಡೆಗಳ ಮೇಲೆ ರಾಮಾಯಣ ಮತ್ತು ಮಹಾಭಾರತ ಕೆತ್ತನೆ
ಜಕಾರ್ತಾದಲ್ಲಿ ಅಲ್ಲಿನ ಸಂಸತ್ತನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವು ಕೇವಲ ರಾಜತಾಂತ್ರಿಕ ಮಟ್ಟಕ್ಕೆ ಸೀಮಿತವಲ್ಲ, ಅದು ಸಾವಿರಾರು ವರ್ಷಗಳ ಸಾಂಸ್ಕೃತಿಕ ಮತ್ತು ನಾಗರಿಕತಾ ಬಾಂಧವ್ಯವನ್ನು ಹೊಂದಿದೆ ಎಂದು ಒತ್ತಿ ಹೇಳಿದರು.
ಪ್ರಂಬನನ್ ದೇವಾಲಯ ಆಗ್ನೇಯ ಏಷ್ಯಾದ ಅತಿ ದೊಡ್ಡ ಹಿಂದೂ ದೇವಾಲಯ ಸಂಕೀರ್ಣಗಳಲ್ಲಿ ಒಂದಾಗಿದೆ. ಇದು 9ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತವಾಗಿದ್ದು, ಅದರಲ್ಲೂ ಶಿವನ ಗೋಪುರ ಅತ್ಯಂತ ಎತ್ತರವಾಗಿದ್ದು ಸುಮಾರು 47 ಮೀಟರ್ ಎತ್ತರ ಹೊಂದಿದೆ. ದೇವಾಲಯದ ಗೋಡೆಗಳ ಮೇಲೆ ರಾಮಾಯಣ ಮತ್ತು ಮಹಾಭಾರತದ ಮಹಾಕಾವ್ಯಗಳ ಸುಂದರ ಕೆತ್ತನೆಗಳು ನಮಗೆ ಇಲ್ಲಿ ಕಾಣಸಿಗುತ್ತವೆ.
ಇಂಡೋನೇಷ್ಯಾ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ, ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ರಾಮಾಯಣ, ಮಹಾಭಾರತ ಮತ್ತು ಗರುಡನಿಗೆ ವಿಶೇಷ ಸ್ಥಾನವಿದೆ. ಇದೇ ಕಾರಣಕ್ಕೆ ಪ್ರಂಬನನ್ ದೇವಾಲಯದ ಸಂರಕ್ಷಣೆ ಕೇವಲ ವಾಸ್ತುಶಿಲ್ಪದ ಕಾಳಜಿ ಮಾತ್ರವಲ್ಲ, ಭಾರತ ಮತ್ತು ಇಂಡೋನೇಷ್ಯಾ ಹಂಚಿಕೊಂಡಿರುವ ಸಾಂಸ್ಕೃತಿಕ ಪರಂಪರೆಯ ಗೌರವವೂ ಹೌದು ಎಂದು ಮೋದಿ ಹೇಳಿದ್ದಾರೆ.
ಪ್ರಂಬನನ್ ದೇವಾಲಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಅದರ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಕಾಂಬೋಡಿಯಾದ ಅಂಗ್ಕೋರ್ ವಾಟ್ ದೇವಾಲಯದ ಜೀರ್ಣೋದ್ಧಾರದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ASI) ಈಗಾಗಲೇ ಮಹತ್ವದ ಪಾತ್ರ ವಹಿಸಿದೆ. ಅದೇ ಮಾದರಿಯಲ್ಲಿ ಇಂಡೋನೇಷ್ಯಾದ ಈ ಪುರಾತನ ಶಿವ ದೇವಾಲಯದ ಪುನರುತ್ಥಾನಕ್ಕೂ ಭಾರತ ಕೈಜೋಡಿಸುವುದು, ಜಗತ್ತಿನಾದ್ಯಂತ ಸನಾತನ ಸಂಸ್ಕೃತಿಯ ಸ್ಮಾರಕಗಳ ರಕ್ಷಣೆಗೆ ಭಾರತದ ಬದ್ಧತೆಯನ್ನು ಮತ್ತೊಮ್ಮೆ ತೋರಿಸುತ್ತದೆ.
ಈ ಘೋಷಣೆಯ ಮೂಲಕ ಭಾರತ-ಇಂಡೋನೇಷ್ಯಾ ಸ್ನೇಹಕ್ಕೆ ಹೊಸ ಆಯಾಮ ಸಿಕ್ಕಿದ್ದು, ಉಭಯ ದೇಶಗಳ ಸಾಂಸ್ಕೃತಿಕ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
