ನವದೆಹಲಿ, ಮಾರ್ಚ್ 23: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಬಿಸಿ ಜಾಗತಿಕ ಇಂಧನ ಮಾರುಕಟ್ಟೆಯನ್ನು ತಲ್ಲಣಗೊಳಿಸಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಭಾರತದ ಇಂಧನ ಭದ್ರತೆಯ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲೂ ಭಾರತವು ಎದೆಗುಂದದೆ, ಸಾಧ್ಯವಿರುವ ಎಲ್ಲಾ ಮೂಲಗಳಿಂದ ತೈಲ ಮತ್ತು ಅನಿಲವನ್ನು ಪಡೆಯುತ್ತಿದೆ ಎಂದು ದೇಶಕ್ಕೆ ಭರವಸೆ ನೀಡಿದ್ದಾರೆ.
ಹಾರ್ಮುಜ್ ಜಲಸಂಧಿ ಬಂದ್
ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಭಾರತದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿ (Strait of Hormuz) ಮಾರ್ಗವನ್ನು ಅಸ್ತವ್ಯಸ್ತಗೊಳಿಸಿದೆ. ಈ ಕುರಿತು ಮಾತನಾಡಿದ ಪ್ರಧಾನಿ, ನಮ್ಮ ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗ ಮತ್ತು ತೈಲ ಪೂರೈಕೆಯ ಮೂಲ ಈ ಪ್ರದೇಶದಲ್ಲಿದೆ. ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಕಠಿಣವಾಗಿರುವುದರಿಂದ ಕಚ್ಚಾ ತೈಲ ಮತ್ತು ರಸಗೊಬ್ಬರಗಳ ಆಮದಿನ ಮೇಲೆ ನೇರ ಪರಿಣಾಮ ಬೀರಿದೆ ಎಂದು ಒಪ್ಪಿಕೊಂಡರು.
ಭಾರತವು ತನ್ನ ಬಳಕೆಯ ಶೇ. 60ರಷ್ಟು ಎಲ್‌ಪಿಜಿ (LPG) ಅನ್ನು ಆಮದು ಮಾಡಿಕೊಳ್ಳುತ್ತಿದೆ. ಯುದ್ಧದ ತೀವ್ರತೆಯಿಂದಾಗಿ ಈ ಪೂರೈಕೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ ಎಂದರು.
41 ದೇಶಗಳಿಂದ ಇಂಧನ ಆಮದು
ಹಿಂದಿನಂತೆ ಕೇವಲ ಬೆರಳೆಣಿಕೆಯ ದೇಶಗಳ ಮೇಲೆ ಅವಲಂಬಿತವಾಗುವ ಬದಲು, ಭಾರತವು ತನ್ನ ಇಂಧನ ಮೂಲಗಳನ್ನು ವಿಸ್ತರಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಇವತ್ತು ಭಾರತವು ಜಗತ್ತಿನ 41 ವಿವಿಧ ದೇಶಗಳಿಂದ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ನಾವು ಯಾವುದೇ ಒಂದು ಪ್ರದೇಶದ ಬಿಕ್ಕಟ್ಟಿನಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಿದ್ದೇವೆ ಎಂದು ಅವರು ವಿವರಿಸಿದರು.
ಇರಾನ್ ಮತ್ತು ಇತರ ಪರ್ಯಾಯ ಮಾರುಕಟ್ಟೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಸರ್ಕಾರ, ಅಗತ್ಯ ಬಿದ್ದರೆ ಹೊಸ ಮಾರುಕಟ್ಟೆಗಳನ್ನು ಹುಡುಕುವ ಕೆಲಸವನ್ನೂ ಮಾಡುತ್ತಿದೆ.
ಎಲ್‌ಪಿಜಿ ಲಭ್ಯತೆಗೆ ವಿಶೇಷ ತಂಡ ರಚನೆ
ದೇಶದ ಸಾಮಾನ್ಯ ಜನರ ಮೇಲೆ ಯುದ್ಧದ ಬಿಸಿ ತಟ್ಟದಂತೆ ನೋಡಿಕೊಳ್ಳಲು ಪ್ರಧಾನಿಯವರು ಸಚಿವರು ಮತ್ತು ಕಾರ್ಯದರ್ಶಿಗಳನ್ನೊಳಗೊಂಡ ಉನ್ನತ ಮಟ್ಟದ ವಿಶೇಷ ತಂಡವನ್ನು ರಚಿಸಿದ್ದಾರೆ. ಈ ತಂಡವು ದಿನದ 24 ಗಂಟೆಯೂ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ದೇಶೀಯವಾಗಿ ಎಲ್‌ಪಿಜಿ ಉತ್ಪಾದನೆ ಹೆಚ್ಚಿಸಲು ಮತ್ತು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳುತ್ತಿದೆ.
ಜನರು ಅನುಭವಿಸುತ್ತಿರುವ ಕಷ್ಟವನ್ನು ಕಡಿಮೆ ಮಾಡುವುದೇ ನಮ್ಮ ಮೊದಲ ಆದ್ಯತೆ. ಕಲ್ಲಿದ್ದಲು ದಾಸ್ತಾನು ಮತ್ತು ವಿದ್ಯುತ್ ಉತ್ಪಾದನೆಯ ಮೇಲೂ ನಾವು ತೀವ್ರ ನಿಗಾ ಇಟ್ಟಿದ್ದೇವೆ ಎಂದು ಪ್ರಧಾನಿ ಹೇಳಿದರು.
ಇರಾನ್ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷವು ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇಂತಹ ಅನಿಶ್ಚಿತತೆಯ ಕಾಲದಲ್ಲಿ ಭಾರತವು ತನ್ನ ರಾಜತಾಂತ್ರಿಕ ಚಾತುರ್ಯದ ಮೂಲಕ ಇಂಧನ ಬಿಕ್ಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿದೆ. ಜಗತ್ತೇ ಸಂಕಷ್ಟದಲ್ಲಿದೆ, ಆದರೆ ಭಾರತವು ತನ್ನ ಪ್ರಜೆಗಳ ಹಿತಾಸಕ್ತಿಯನ್ನು ಕಾಪಾಡಲು ಬದ್ಧವಾಗಿದೆ ಮೋದಿ ಹೇಳಿದರು.
