ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸದ ವೇಳೆ ತೆಗೆದ ಒಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಒಮಾನ್ ದೇಶದ ಭೇಟಿಯ ಸಂದರ್ಭದಲ್ಲಿನ ಆ ಚಿತ್ರದಲ್ಲಿ ಪ್ರಧಾನಿ ಮೋದಿ ಅವರ ಕಿವಿಯಲ್ಲಿ ಓಲೆಯಾಕಾರದ ವಸ್ತು ಗಮನ ಸೆಳೆದಿದ್ದು, ಇದು ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ‘ಮೋದಿಯವರ ಹೊಸ ಸ್ಟೈಲಾ?’, ‘ಹೊಸ ಆಭರಣ ಧರಿಸಿದ್ದಾರಾ?’ ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.
ಆದರೆ ಪ್ರಧಾನಿ ಮೋದಿ ಅವರ ಕಿವಿಯಲ್ಲಿ ಕಂಡುಬಂದಿದ್ದ ಸಾಧನ ಯಾವುದೇ ಆಭರಣವಲ್ಲ. ಅದು ನೈಜ ಸಮಯದ ಸಂವಾದ ಅನುವಾದಕ ಸಾಧನ (Real-Time Translation Device) ಎನ್ನುವುದು ಇದೀಗ ಸ್ಪಷ್ಟವಾಗಿದೆ. ಉನ್ನತ ಮಟ್ಟದ ಅಂತಾರಾಷ್ಟ್ರೀಯ ಸಭೆಗಳು ಮತ್ತು ವಿದೇಶಿ ಗಣ್ಯರೊಂದಿಗೆ ನಡೆಯುವ ಮಾತುಕತೆಗಳಲ್ಲಿ ಸುಗಮ ಸಂವಹನಕ್ಕೆ ಸಹಕಾರಿಯಾಗುವ ಈ ಆಧುನಿಕ ತಂತ್ರಜ್ಞಾನವನ್ನು ಪ್ರಧಾನಿ ಮೋದಿ ಬಳಸಿದ್ದರು.
ಒಮಾನ್ ಭೇಟಿ ವೇಳೆ ವೈರಲ್ ಆದ ಚಿತ್ರ
ಮೂರು ದೇಶಗಳ ವಿದೇಶಿ ಪ್ರವಾಸದ ಭಾಗವಾಗಿ ಪ್ರಧಾನಿ ಮೋದಿ ಎರಡು ದಿನಗಳ ಕಾಲ ಗಲ್ಫ್ ರಾಷ್ಟ್ರವಾದ ಒಮಾನ್‌ಗೆ ಭೇಟಿ ನೀಡಿದ್ದರು. ಈ ವೇಳೆ ಮಸ್ಕತ್ ವಿಮಾನ ನಿಲ್ದಾಣದಲ್ಲಿ ಒಮಾನ್‌ನ ಉಪಪ್ರಧಾನಿ ಸಯ್ಯದ್ ಶಿಹಾಬ್ ಬಿನ್ ತಾರಿಕ್ ಅಲ್ ಸೈದ್ ಅವರನ್ನು ಸ್ವಾಗತ ಸಮಾರಂಭದಲ್ಲಿ ಭೇಟಿಯಾದ ಕ್ಷಣದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಫೋಟೋಗಳಲ್ಲಿ ಪ್ರಧಾನಿ ಮೋದಿ ಅವರ ಕಿವಿಯಲ್ಲಿ ಓಲೆಯಾಕಾರದ ಸಾಧನ ಕಂಡುಬಂದಿದ್ದು, ಇದೇ ಚರ್ಚೆಗೆ ಕಾರಣವಾಯಿತು.
ಏನು ಈ ನೈಜ ಸಮಯದ ಅನುವಾದ ಸಾಧನ?
ಈ ಸಾಧನವು ವಿದೇಶಿ ಗಣ್ಯರು ಮಾತನಾಡುವ ಭಾಷೆಯನ್ನು ತಕ್ಷಣವೇ (ರಿಯಲ್ ಟೈಂನಲ್ಲಿ) ಪ್ರಧಾನಿ ಅವರ ಭಾಷೆಗೆ ಅನುವಾದ ಮಾಡಿ ಕೇಳಿಸುವ ತಂತ್ರಜ್ಞಾನವನ್ನು ಹೊಂದಿದೆ. ಉದಾಹರಣೆಗೆ, ಒಮಾನ್‌ನ ಅಧಿಕೃತ ಭಾಷೆಯಾದ ಅರೇಬಿಕ್‌ನಲ್ಲಿ ಮಾತನಾಡುವ ನಾಯಕರ ಮಾತುಗಳನ್ನು ಈ ಸಾಧನವು ತಕ್ಷಣವೇ ಹಿಂದಿ ಅಥವಾ ಇಂಗ್ಲಿಷ್‌ಗೆ ಭಾಷಾಂತರಿಸಿ ಪ್ರಧಾನಿ ಮೋದಿ ಅವರಿಗೆ ಸ್ಪಷ್ಟವಾಗಿ ತಿಳಿಸುತ್ತದೆ. ಇದರಿಂದ ಮಾತುಕತೆ ವೇಳೆ ಭಾಷಾ ಅಡೆತಡೆ ನಿವಾರಣೆಯಾಗುತ್ತದೆ.
ಈ ರೀತಿಯ ಅನುವಾದ ಸಾಧನಗಳನ್ನು ಈಗಾಗಲೇ ಅನೇಕ ರಾಷ್ಟ್ರಗಳ ನಾಯಕರು, ರಾಜತಾಂತ್ರಿಕರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಬಳಸುತ್ತಿದ್ದಾರೆ. ಬಹುಭಾಷಾ ಸಂವಾದ ನಡೆಯುವ ಸಭೆಗಳಲ್ಲಿ ಇದು ಸಮಯ ಉಳಿಸುವುದರ ಜೊತೆಗೆ ಸಂವಹನವನ್ನು ಇನ್ನಷ್ಟು ಸುಲಭಗೊಳಿಸುತ್ತದೆ.
