ಅನಿವಾಸಿ ಭಾರತೀಯರ ಸುರಕ್ಷತೆಗಾಗಿ ಮೋದಿ ಪ್ಲಾನ್‌: 8 ದೇಶಗಳ ನಾಯಕರೊಂದಿಗೆ ಪ್ರಧಾನಿ ಮಹತ್ವದ ಚರ್ಚೆ

Untitled design (46)

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ತುತ್ತತುದಿಗೆ ತಲುಪಿದ್ದು, ಈ ಬಿಕ್ಕಟ್ಟಿನ ನಡುವೆ ಭಾರತೀಯ ನಾಗರಿಕರ ಸುರಕ್ಷತೆಯೇ ಪರಮ ಆದ್ಯತೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾರಿದ್ದಾರೆ. ಮಂಗಳವಾರ ಪ್ರಧಾನಿಯವರು ಒಮಾನ್, ಕತಾರ್ ಮತ್ತು ಕುವೈತ್ ಸೇರಿದಂತೆ ಎಂಟು ಪ್ರಮುಖ ರಾಷ್ಟ್ರಗಳ ಮುಖ್ಯಸ್ಥರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಇರಾನ್‌ನ ಪ್ರತೀಕಾರದ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಜಾಗತಿಕ ನಾಯಕರೊಂದಿಗೆ ಸಮಾಲೋಚನೆ

ಇರಾನ್ ಕ್ಷಿಪಣಿ ದಾಳಿಗೆ ತುತ್ತಾಗಿರುವ ಪ್ರದೇಶಗಳ ಪರಿಸ್ಥಿತಿಯನ್ನು ಅವಲೋಕಿಸಲು ಮೋದಿ ಅವರು ಒಮಾನ್ ಸುಲ್ತಾನ ಹೈತಮ್ ಬಿನ್ ತಾರಿಕ್, ಕುವೈತ್ ರಾಜಕುಮಾರ ಶೇಖ್ ಸಬಾಹ್ ಅಲ್-ಖಾಲಿದ್, ಮತ್ತು ಕತಾರ್ ಅಮೀರ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ್ದಾರೆ. ದಾಳಿಯಿಂದ ಉಂಟಾಗಿರುವ ಸಾವು-ನೋವು ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಯಾವುದೇ ದೇಶದ ಸಾರ್ವಭೌಮತ್ವದ ಉಲ್ಲಂಘನೆಯನ್ನು ಭಾರತ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಭಾರತೀಯರ ಸುರಕ್ಷತೆಗೆ ಆದ್ಯತೆ

ಮಧ್ಯಪ್ರಾಚ್ಯದ ವಿವಿಧ ರಾಷ್ಟ್ರಗಳಲ್ಲಿ ಲಕ್ಷಾಂತರ ಭಾರತೀಯರು ಉದ್ಯೋಗ ಮಾಡುತ್ತಿದ್ದಾರೆ. ಯುದ್ಧದ ವಾತಾವರಣದಿಂದಾಗಿ ಅವರ ಜೀವಕ್ಕೆ ಅಪಾಯ ಎದುರಾಗಬಾರದು ಎಂಬ ದೃಷ್ಟಿಯಿಂದ, ಆಯಾ ದೇಶಗಳ ಮುಖ್ಯಸ್ಥರಿಗೆ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸುವಂತೆ ಮೋದಿ ಮನವಿ ಮಾಡಿದ್ದಾರೆ. ಕಳೆದ ಎರಡು ದಿನಗಳಲ್ಲಿ ಪ್ರಧಾನಿಯವರು ಇಸ್ರೇಲ್, ಬಹ್ರೇನ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಒಟ್ಟು ಎಂಟು ರಾಷ್ಟ್ರಗಳ ನಾಯಕರನ್ನು ಸಂಪರ್ಕಿಸಿ, ಈ ಪ್ರಾಂತ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಭಾರತದ ಸಹಕಾರವನ್ನು ಭರವಸೆ ನೀಡಿದ್ದಾರೆ.

ಇರಾನ್‌ನ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನಡೆಸುತ್ತಿರುವ ಕ್ಷಿಪಣಿ ದಾಳಿಗಳು ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯ ಮೇಲೆ ಮೇಲೆ ಪ್ರಭಾವ ಬೀರುತ್ತಿವೆ. ಇಂತಹ ಸಮಯದಲ್ಲಿ ಭಾರತವು ತಟಸ್ಥ ನಿಲುವು ತಳೆಯದೆ, ಭಯೋತ್ಪಾದಕ ಕೃತ್ಯಗಳು ಮತ್ತು ಸಾರ್ವಭೌಮತ್ವದ ಮೇಲೆ ನಡೆಯುವ ದಾಳಿಗಳನ್ನು ಖಂಡಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ತನ್ನ ಪ್ರಬಲ ನಾಯಕತ್ವವನ್ನು ಸಾಬೀತುಪಡಿಸಿದೆ.

Exit mobile version