ಕಾಶ್ಮೀರದಲ್ಲಿ ಉಗ್ರರ ದಾಳಿ: “ಯಾರನ್ನೂ ಬಿಡೋದಿಲ್ಲ”..ಟೆರರಿಸ್ಟ್‌ಗಳಿಗೆ ಪ್ರಧಾನಿ ಮೋದಿ ಎಚ್ಚರಿಕೆ

11ghdf1 (1)

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಕರ್ನಾಟಕದ ಶಿವಮೊಗ್ಗ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ ದುರ್ಮರಣ ಹೊಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಐವರು ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಈ ಹೀನ ಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿ, “ಈ ದಾಳಿಗೆ ಕಾರಣರಾದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ,” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈ ಭಯಾನಕ ಘಟನೆ ಪಹಲ್ಗಾಮ್‌ನ ಬೈಸರನ್ ಪ್ರದೇಶದಲ್ಲಿ ಸಂಭವಿಸಿದ್ದು, ಪ್ರವಾಸಿ ತಾಣದಲ್ಲಿ ನೆಲೆಸಿದ್ದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈವರೆಗೆ ಯೋಧರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದ ಭಯೋತ್ಪಾದಕರು ಈಗ ಪ್ರವಾಸಿಗರ ಮೇಲೆ ದಾಳಿ ನಡೆಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮೃತರಾದ ಮಂಜುನಾಥ್ ರಾವ್‌ ಅವರು ತಮ್ಮ ಕುಟುಂಬದೊಂದಿಗೆ ಪಹಲ್ಗಾಮ್‌ಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ದಾಳಿಗೆ ಬಲಿಯಾಗಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡವರಲ್ಲಿ ಬೇರೆ ಬೇರೆ ರಾಜ್ಯಗಳಿಗೆ ಸೇರಿದವರಾಗಿದ್ದಾರೆ. ಗಾಯಾಳುಗಳಲ್ಲಿ ಗುಜರಾತ್‌ನ ವಿನೋ ಭಟ್, ಮಹಾರಾಷ್ಟ್ರದ ಬಾಲಚಂದ್ರು, ಕರ್ನಾಟಕದ ಅಭಿಜವನ್ ರಾವ್, ತಮಿಳುನಾಡಿನ ಸಂತು ಮತ್ತು ಒರಿಸ್ಸಾದ ಸಾಹಸಿ ಕುಮಾರಿ ಸೇರಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್‌

ಈ ದಾಳಿಯ ಕುರಿತು ಪ್ರಧಾನಿ ಮೋದಿ ತೀವ್ರ ನೋವು ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದು, ಇದಕ್ಕೆ ಕಾರಣರಾದ ಯಾರನ್ನೂ ಕೂಡ ಸುಮ್ಮನೆ ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. “ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾನು ಖಂಡಿಸುತ್ತೇನೆ. ಈ ಹೇಯ ಕೃತ್ಯದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಈ ನಡವಳಿಕೆಯ ಹಿಂದೆ ಇರುವ ಎಲ್ಲರನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸಲಾಗುವುದು. ಅವರನ್ನು ಬಿಡುವುದು ಸಾಧ್ಯವೇ ಇಲ್ಲ! ಅವರ ದುಷ್ಟ ಕಾರ್ಯಸೂಚಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಅದು ಇನ್ನಷ್ಟು ಬಲಗೊಳ್ಳುತ್ತದೆ’ ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿ ಸೌದಿ ಅರೇಬಿಯಾದ ಪ್ರವಾಸದಲ್ಲಿರುವಾಗಲೇ ಗೃಹ ಸಚಿವ ಅಮಿತ್ ಶಾಗೆ ತುರ್ತು ಸೂಚನೆ ನೀಡಿದ್ದು, ಅವರು ಸಂಜೆ ಪಹಲ್ಗಾಮ್‌ಗೆ ತೆರಳುವ ನಿರೀಕ್ಷೆಯಿದೆ. ದಾಳಿಯ ನಂತರ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಯಿತು ಮತ್ತು ಪ್ರದೇಶದಲ್ಲಿ ಉಗ್ರರ ಹುಡುಕಾಟ ಆರಂಭಿಸಲಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ

ಈ ಘಟನೆಯ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ, “ಭಯೋತ್ಪಾದಕರ ಈ ದಾಳಿ ಹೇಡಿತನದ ಕೃತ್ಯವಾಗಿದೆ. ಪ್ರವಾಸಿಗರ ಮೇಲೆ ನಡೆದ ಈ ದಾಳಿ ಹೃದಯವಿದ್ರಾವಕವಾಗಿದೆ. ಈ ದೇಶದ ಮುಗ್ಧ ನಾಗರಿಕರು ಪ್ರಾಣ ಕಳೆದುಕೊಳ್ಳದಂತೆ ಕ್ರಮ ಕೈಗೊಳ್ಳಬೇಕು,” ಎಂದು ಹೇಳಿದ್ದಾರೆ. ಅವರು ಮೃತರಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

Exit mobile version