ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಭಣಿಸುತ್ತಿರುವ ಯುದ್ಧದ ಬಿಕ್ಕಟ್ಟಿನ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಮಹತ್ವದ ಕರೆ ನೀಡಿದ್ದಾರೆ. ಒಂದು ವರ್ಷದವರೆಗೆ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಪೆಟ್ರೋಲ್/ಡೀಸೆಲ್ ಮಿತವಾಗಿ ಬಳಸಿ, ಮನೆಯಿಂದಲೇ ಕೆಲಸ ಮಾಡಿ ಎಂದು ಕೋರಿರುವ ಅವರು, ಇದನ್ನು ರಾಷ್ಟ್ರೀಯ ಕರ್ತವ್ಯ ಎಂದು ಬಣ್ಣಿಸಿದ್ದಾರೆ. ಹೈದರಾಬಾದ್‌ನ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಆರ್ಥಿಕ ಭದ್ರತೆಗೆ ಪ್ರತಿಯೊಬ್ಬ ನಾಗರಿಕನೂ ಸಂಕಲ್ಪ ಮಾಡಬೇಕಾದ ಅನಿವಾರ್ಯತೆಯನ್ನು ಹೇಳಿದರು.
ಮೋದಿ ಮಾತಿನ ಉದ್ದೇಶವೇನು?
ಪ್ರಧಾನಿ ಮೋದಿ ಅವರ ಈ ಕರೆಯ ಹಿಂದೆ ಐದು ಪ್ರಮುಖ ಪ್ರಸ್ತಾವನೆಗಳು ಇವೆ. ಅವುಗಳ ಸಂಪೂರ್ಣ ವಿವರ ಇಲ್ಲಿದೆ.
1. ಇಂಧನ ಉಳಿತಾಯಕ್ಕೆ ಆದ್ಯತೆ
ಭಾರತ ತನ್ನ ಅಗತ್ಯದ ಶೇ. 88 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಯುದ್ಧದಿಂದ ತೈಲ ಬೆಲೆ ಏರಿದರೆ ದೇಶಕ್ಕೆ ದೊಡ್ಡ ಹೊರೆ ಬರುತ್ತದೆ. ಆದ್ದರಿಂದ ಮೆಟ್ರೋ, ಸಾರ್ವಜನಿಕ ಸಾರಿಗೆ ಬಳಸಿ, ಕಾರ್ ಪೂಲಿಂಗ್ ರೂಢಿಸಿಕೊಳ್ಳಿ ಹಾಗೂ ಎಲೆಕ್ಟ್ರಿಕ್ ವಾಹನಗಳತ್ತ ಸಾಗಿ ಎಂದು ಮೋದಿ ಕರೆ ನೀಡಿದ್ದಾರೆ.
2. ಮತ್ತೆ ‘ವರ್ಕ್ ಫ್ರಮ್ ಹೋಮ್’ (WFH)
ಕೊರೋನಾ ಸಮಯದಲ್ಲಿ WFH ನಿಂದ ಇಂಧನ ಬಳಕೆ ಗಣನೀಯವಾಗಿ ಕಡಿಮೆಯಾಗಿತ್ತು. ಕಚೇರಿ ಪ್ರಯಾಣದ ವೆಚ್ಚ ಮತ್ತು ಪೆಟ್ರೋಲ್/ಡೀಸೆಲ್ ವ್ಯರ್ಥವನ್ನು ತಪ್ಪಿಸಲು ಮನೆಯಿಂದಲೇ ಕೆಲಸ ಮತ್ತು ಆನ್ಲೈನ್ ಸಭೆಗಳನ್ನು ಮತ್ತೆ ಜಾರಿಗೆ ತರುವಂತೆ ಸೂಚಿಸಿದರು.
3. ವಿದೇಶಿ ಪ್ರವಾಸ ಮತ್ತು ಮದುವೆಗಳಿಗೆ ಬ್ರೇಕ್
ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲು ಒಂದು ವರ್ಷದವರೆಗೆ ಅನಗತ್ಯ ವಿದೇಶಿ ಪ್ರವಾಸಗಳನ್ನು ಮುಂದೂಡಿ. ವಿದೇಶಗಳಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಸಿಕೊಳ್ಳುವ ಬದಲು, ಭಾರತೀಯ ಪ್ರವಾಸಿ ತಾಣಗಳಲ್ಲೇ ಸಮಾರಂಭ ಆಯೋಜಿಸಿ. ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳ ಬೆಂಬಲ ನೀಡಿ ಎಂದು ಅವರು ಕರೆ ನೀಡಿದ್ದಾರೆ.
4. ಚಿನ್ನದ ಬಳಕೆಗೆ ಒಂದು ವರ್ಷ ವಿರಾಮ
ಚಿನ್ನದ ಆಮದು ದೇಶದ ಬೊಕ್ಕಸಕ್ಕೆ ಭಾರೀ ಹೊರೆಯಾಗಿದೆ. ವಿದೇಶಿ ವಿನಿಮಯ ಉಳಿಸುವ ದೃಷ್ಟಿಯಿಂದ, ಮನೆಯಲ್ಲಿ ಎಷ್ಟೇ ಶುಭ ಸಮಾರಂಭಗಳಿದ್ದರೂ, ಮುಂದಿನ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡದಿರಲು ಸಂಕಲ್ಪ ಮಾಡಿ ಎಂದು ಪ್ರಧಾನಿ ಮನವಿ ಮಾಡಿದರು.
5. ಅಡುಗೆ ಎಣ್ಣೆ ಮತ್ತು ಗೊಬ್ಬರ ಬಳಕೆಯಲ್ಲಿ ಮಿತಿ
ಭಾರತ ಅಡುಗೆ ಎಣ್ಣೆಯನ್ನೂ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ ಪ್ರತಿ ಮನೆಯಲ್ಲೂ ಅಡುಗೆ ಎಣ್ಣೆಯ ಬಳಕೆಯನ್ನು ಮಿತಿಗೊಳಿಸಬೇಕು. ಹಾಗೆಯೇ ರೈತರು ಆಮದು ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ನೈಸರ್ಗಿಕ ಕೃಷಿಯ ಕಡೆ ಗಮನ ಹರಿಸಬೇಕು.
ಆರ್ಥಿಕತೆ ಮೇಲೆ ಯುದ್ಧದ ಪರಿಣಾಮ
ಪಶ್ಚಿಮ ಏಷ್ಯಾ ಯುದ್ಧದಿಂದ ಜಾಗತಿಕ ತೈಲ ಮಾರುಕಟ್ಟೆ ಅನಿಶ್ಚಿತತೆಯಲ್ಲಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು $120ಕ್ಕೆ ಏರಿದೆ. ಡಾಲರ್ ಎದುರು ರೂಪಾಯಿಯ ಮೌಲ್ಯ ಕುಸಿದಿದೆ. ಈ ಹಿನ್ನೆಲೆಯಲ್ಲಿ, ಜನರು ಪೆಟ್ರೋಲ್/ಡೀಸೆಲ್ ಕಡಿಮೆ ಬಳಸಿದರೆ, ಚಿನ್ನದ ಆಮದು ಕಡಿಮೆಯಾದರೆ ವಿದೇಶಿ ವಿನಿಮಯದ ಮೇಲಿನ ಒತ್ತಡ ತಗ್ಗುತ್ತದೆ. ಇಲ್ಲದಿದ್ದರೆ ನೇರವಾಗಿ ಇಂಧನ ಬೆಲೆ ಏರಿಕೆ ಮತ್ತು ದೇಶಾದ್ಯಂತ ಹಣದುಬ್ಬರ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
