ಪಾಟ್ನಾ: ಬಿಹಾರದ ಪೂರ್ಣಿಯದ ಸ್ವತಂತ್ರ ಸಂಸದ ಪಪ್ಪು ಯಾದವ್ ಅಲಿಯಾಸ್ ರಾಜೇಶ್ ರಂಜನ್ ಅವರು ಮಹಿಳೆಯರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯೊಂದು ತೀವ್ರ ವಿವಾದ ಸೃಷ್ಟಿಸಿದೆ. “ಶೇಕಡ 90ರಷ್ಟು ಮಹಿಳಾ ರಾಜಕೀಯ ವೃತ್ತಿಜೀವನವು ರಾಜಕಾರಣಿಗಳ ಹಾಸಿಗೆಯಲ್ಲಿ ಪ್ರಾರಂಭವಾಗುತ್ತದೆ” ಎಂದು ಪಪ್ಪು ಯಾದವ್ ಹೇಳಿದ್ದಾರೆ. ಈ ಹೇಳಿಕೆಯ ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಪಪ್ಪು ಯಾದವ್ ಅವರ ಈ ಹೇಳಿಕೆಗೆ ಬಿಹಾರ ರಾಜ್ಯ ಮಹಿಳಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪಪ್ಪು ಯಾದವ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಎಚ್ಚರಿಕೆಯನ್ನೂ ಆಯೋಗ ನೀಡಿದೆ.
ಏನು ಹೇಳಿದ್ದಾರೆ ಪಪ್ಪು ಯಾದವ್?
ಮಾಧ್ಯಮಗಳೊಂದಿಗೆ ಮಾತನಾಡಿದ ಪಪ್ಪು ಯಾದವ್, ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ದೇವತೆಗಳೆಂದು ಪರಿಗಣಿಸಲಾಗಿದ್ದರೂ ವಾಸ್ತವವು ವಿರುದ್ಧವಾಗಿದೆ ಎಂದರು. ರಾಜಕೀಯದಲ್ಲಿ ಹೆಚ್ಚಿನ ಮಹಿಳೆಯರು ಪ್ರಭಾವಿ ಜನರ ವೈಯಕ್ತಿಕ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ ಎಂದು ಆರೋಪಿಸಿದರು. “ಮಹಿಳೆಯರ ಶೋಷಣೆ ಅಧಿಕಾರದ ಕಾರಿಡಾರ್ ನಲ್ಲಿ ಆಳವಾಗಿ ಬೇರೂರಿದೆ. ಕಟು ಸತ್ಯವೆಂದರೆ ಶೇ.90ರಷ್ಟು ಮಹಿಳಾ ರಾಜಕೀಯ ವೃತ್ತಿಜೀವನವು ರಾಜಕಾರಣಿಗಳ ಹಾಸಿಗೆಯಲ್ಲಿ ಪ್ರಾರಂಭವಾಗುತ್ತದೆ” ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ರಾಜಕಾರಣಿಗಳ ಅಶ್ಲೀಲ ಅಭ್ಯಾಸದ ಆರೋಪ
ಪಪ್ಪು ಯಾದವ್ ರಾಜಕಾರಣಿಗಳ ಪಾತ್ರವನ್ನೂ ಪ್ರಶ್ನಿಸಿದ್ದಾರೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿನ ಅನೇಕ ಪ್ರತಿನಿಧಿಗಳು ಮಹಿಳೆಯರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ ಎಂದು ಹೇಳಿದರು. “ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಾರೆ. ಡಿಜಿಟಲ್ ಡೇಟಾವನ್ನು ಸಂಪೂರ್ಣ ಅಳಿಸಲು ಸಾಧ್ಯವಿಲ್ಲದ ಕಾರಣ, ರಾಜಕಾರಣಿಗಳ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಬೇಕು” ಎಂದರು.
ಮಹಿಳಾ ಮೀಸಲಾತಿ ಕಾಯ್ದೆ ಬಗ್ಗೆ ಟೀಕೆ
‘ನಾರಿ ಶಕ್ತಿ ವಂದನ ಕಾಯ್ದೆ’ಯನ್ನು ಪಪ್ಪು ಯಾದವ್ ಕೇವಲ ರಾಜಕೀಯ ಗಿಮಿಕ್ ಎಂದು ಕರೆದರು. “ಸರ್ಕಾರಕ್ಕೆ ಪೂರ್ಣ ಬಹುಮತವಿದ್ದಾಗ ಈ ಕಾನೂನನ್ನು ಮೊದಲೇ ಏಕೆ ಪರಿಚಯಿಸಲಿಲ್ಲ? ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ-ಪಂಗಡಗಳು ಮತ್ತು ಅಲ್ಪಸಂಖ್ಯಾತರ ಮಹಿಳೆಯರಿಗೆ ಪ್ರತ್ಯೇಕ ನಿಬಂಧನೆಗಳಿಲ್ಲದೆ, ಈ ಕಾಯ್ದೆಯ ಲಾಭ ಶ್ರೀಮಂತರಿಗೆ ಸೀಮಿತವಾಗುತ್ತದೆ” ಎಂದು ಆರೋಪಿಸಿದರು.
ಜಾತಿ ಜನಗಣತಿ ಮತ್ತು ಇತರ ವಿವಾದಗಳು
ಸರ್ಕಾರ ಜಾತಿ ಜನಗಣತಿಯನ್ನು ತಪ್ಪಿಸುತ್ತಿದೆ ಎಂದು ಪಪ್ಪು ಯಾದವ್ ಆರೋಪಿಸಿದರು. “ಹಿಂದುಳಿದ ಮತ್ತು ದಲಿತ ವರ್ಗಗಳಿಗೆ ಅವರ ಅರ್ಹತೆಯನ್ನು ನೀಡುವ ಬಯಕೆ ಸರ್ಕಾರಕ್ಕೆ ಇಲ್ಲ” ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಮನುಸ್ಮೃತಿಯನ್ನು ಉಲ್ಲೇಖಿಸಿ, ಈ ಸಿದ್ಧಾಂತಗಳು ಮಹಿಳೆಯರು ಮತ್ತು ಹಿಂದುಳಿದವರ ಹಕ್ಕುಗಳಿಗೆ ವಿರುದ್ಧವಾದ ಇತಿಹಾಸವನ್ನು ಹೊಂದಿವೆ ಎಂದು ಆರೋಪಿಸಿದರು. ನ್ಯಾಯಾಂಗ, ಸೇನೆ, ಪೊಲೀಸ್ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಹಿಂದುಳಿದ ಸಮುದಾಯಗಳ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇರುವುದನ್ನು ಅವರು ಪ್ರಶ್ನಿಸಿದರು.
