ಗಣರಾಜ್ಯೋತ್ಸವಕ್ಕೆ ಖಲಿಸ್ತಾನಿ ಉಗ್ರ ಪನ್ನು ಬೆದರಿಕೆ: ದೆಹಲಿಯಲ್ಲಿ FIR ದಾಖಲು

Untitled design 2026 01 23T163526.110

ನವದೆಹಲಿ: ದೇಶದ 77ನೇ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ನಿಷೇಧಿತ ಸಿಖ್ ಫಾರ್ ಜಸ್ಟೀಸ್ (SFJ) ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಮತ್ತೆ ಭಾರತದ ವಿರುದ್ಧ ವಿಷ ಕಾರಿದ್ದಾನೆ. ಜನವರಿ 26 ರಂದು ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಆತನ ವಿರುದ್ಧ ಶುಕ್ರವಾರ ಕಠಿಣ ಕಾನೂನುಗಳ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ.

ದೆಹಲಿಯಲ್ಲಿ ಪೊಲೀಸರು ಕಟ್ಟೆಚ್ಚರ

ಪನ್ನುನ್ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ, ದೆಹಲಿಯ ರೋಹಿಣಿ ಮತ್ತು ದಾಬ್ರಿ ಪ್ರದೇಶಗಳಲ್ಲಿ ತನ್ನ ಸ್ಲೀಪರ್ ಸೆಲ್‌ಗಳ ಮೂಲಕ ಖಲಿಸ್ತಾನ್ ಪರ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ ಎಂದು ಹಸಿ ಸುಳ್ಳುಗಳನ್ನು ಹೇಳಿಕೊಂಡಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರ ವಿಶೇಷ ಘಟಕವು, ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 196, 197, 152 ಮತ್ತು 61 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಈ ಸೆಕ್ಷನ್‌ಗಳು ದೇಶದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕ್ರಿಮಿನಲ್ ಪಿತೂರಿಗಳಿಗೆ ಸಂಬಂಧಿಸಿವೆ. ಸದ್ಯ ದೆಹಲಿಯ ಉದ್ದಗಲಕ್ಕೂ ಹುಡುಕಾಟ ನಡೆಸಲಾಗಿದ್ದು, ಎಲ್ಲಿಯೂ ಅಂತಹ ಪೋಸ್ಟರ್‌ಗಳು ಕಂಡುಬಂದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಕ್ರೊಯೇಷಿಯಾದ ರಾಜಧಾನಿ ಜಾಗ್ರೆಬ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಖಲಿಸ್ತಾನಿ ಕಾರ್ಯಕರ್ತರು ಅತಿಕ್ರಮಣ ಮಾಡಿದ್ದಾರೆ. ರಾಯಭಾರ ಕಚೇರಿ ಆವರಣಕ್ಕೆ ನುಗ್ಗಿದ ಕಿಡಿಗೇಡಿಯೊಬ್ಬ ಭಾರತದ ರಾಷ್ಟ್ರಧ್ವಜವನ್ನು ತೆಗೆದುಹಾಕಿ, ಅದರ ಬದಲಿಗೆ ಖಲಿಸ್ತಾನ್ ಧ್ವಜವನ್ನು ಹಾರಿಸುತ್ತಿರುವ ವೀಡಿಯೊವನ್ನು ಪನ್ನುನ್ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾನೆ. ಈ ಕೃತ್ಯವನ್ನು ಭಾರತ ಸರ್ಕಾರ ಮತ್ತು ವಿದೇಶಾಂಗ ಸಚಿವಾಲಯ (MEA) ತೀವ್ರವಾಗಿ ಖಂಡಿಸಿದೆ. ಜನವರಿ 27 ರಂದು ದೆಹಲಿಯಲ್ಲಿ ಭಾರತ-ಯುರೋಪಿಯನ್ ಯೂನಿಯನ್ ಶೃಂಗಸಭೆ ನಡೆಯಲಿರುವ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರನವಾಗಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿರೋಧ

ಭಾರತವು ಈ ಹಿಂದೆಯೇ ಪನ್ನುನ್ ಮತ್ತು ಎಸ್‌ಎಫ್‌ಜೆ ಸಂಘಟನೆಯನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಕೆನಡಾ, ಯುಕೆ, ಯುಎಸ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತೀಯ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಇಂತಹ ವಿಧ್ವಂಸಕ ಕೃತ್ಯಗಳ ಬಗ್ಗೆ ಭಾರತ ಸರ್ಕಾರವು ಆಯಾ ದೇಶಗಳೊಂದಿಗೆ ಪದೇ ಪದೇ ಕಳವಳ ವ್ಯಕ್ತಪಡಿಸಿದೆ. ಗಣರಾಜ್ಯೋತ್ಸವದಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ದೆಹಲಿ ಪೊಲೀಸರು ಮತ್ತು ರಾಷ್ಟ್ರೀಯ ಭದ್ರತಾ ಏಜೆನ್ಸಿಗಳು ದೆಹಲಿಯಲ್ಲಿ ಕಟ್ಟುನಿಟ್ಟಿನ ಯೋಜನೆ ರೂಪಿಸಿದೆ.

Exit mobile version