ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 1995ರಿಂದ ನೆಲೆಸಿದ್ದ, 100ಕ್ಕೂ ಹೆಚ್ಚು ಒಳನುಸುಳುವಿಕೆ ಯತ್ನಗಳಲ್ಲಿ ರೂವಾರಿಯಾಗಿದ್ದ, ಉಗ್ರರ ‘ಮಾನವ ಜಿಪಿಎಸ್’ ಎಂದೇ ಕುಖ್ಯಾತಿಗೊಳಗಾಗಿದ್ದ ಪಾಕಿಸ್ತಾನಿ ಉಗ್ರ ಬಾಗು ಖಾನ್ ಅಲಿಯಾಸ್ ಸಮಂದರ್ ಚಾಚಾ ಭಾರತೀಯ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ. ಕಳೆದ ವಾರ ಕಾಶ್ಮೀರದ ಗುರೇಜ್ ಸೆಕ್ಟರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿದ್ದರು. ಅವರಲ್ಲಿ ಬಾಗು ಖಾನ್ ಕೂಡ ಇದ್ದಾನೆ ಎಂದು ಶನಿವಾರ ದೃಢಪಟ್ಟಿದೆ.
ಗುರೇಜ್‌ನಲ್ಲಿ ಎನ್‌ಕೌಂಟರ್
ಗುರೇಜ್ ವಲಯದ ನೌಶೇರಾ ನೌರ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಬಾಗು ಖಾನ್ ಮತ್ತೊಬ್ಬ ಉಗ್ರನ ಜತೆ ಭಾರತಕ್ಕೆ ಒಳನುಸುಳಲು ಯತ್ನಿಸುತ್ತಿದ್ದ. ಈ ವೇಳೆ ಭಾರತೀಯ ಸೇನೆಯು ಗುಂಡು ಹಾರಿಸಿದ್ದು, ಇಬ್ಬರೂ ಉಗ್ರರು ಸಾವನ್ನಪ್ಪಿದ್ದಾರೆ. ಮೃತ ಬಾಗು ಧರಿಸಿದ್ದ ಬಟ್ಟೆಯೊಳಗೆ ಪಾಕಿಸ್ತಾನಕ್ಕೆ ಸೇರಿದವನೆಂದು ಸಾಬೀತುಪಡಿಸುವ ಸರ್ಕಾರಿ ದಾಖಲೆಗಳು ಪತ್ತೆಯಾಗಿವೆ.
1995ರಿಂದ ಪಿಒಕೆಯಲ್ಲಿ ವಾಸವಾಗಿದ್ದ ಬಾಗು ಖಾನ್, 100ಕ್ಕೂ ಹೆಚ್ಚು ಒಳನುಸುಳುವಿಕೆ ಯತ್ನಗಳಲ್ಲಿ ಭಾಗಿಯಾಗಿದ್ದ. ಇವನ ಯೋಜನೆಗಳು ಬಹುತೇಕ ಯಶಸ್ವಿಯಾಗಿದ್ದವು. ಕಾಶ್ಮೀರದ ಕಠಿಣ ಭೂಪ್ರದೇಶ ಮತ್ತು ರಹಸ್ಯ ಮಾರ್ಗಗಳ ಬಗ್ಗೆ ಆತನಿಗೆ ಆಳವಾದ ಜ್ಞಾನವಿತ್ತು. ಈ ಕಾರಣಕ್ಕೆ ಆತನನ್ನು ‘ಮಾನವ ಜಿಪಿಎಸ್’ ಎಂದು ಕರೆಯಲಾಗುತ್ತಿತ್ತು. ಗುರೇಜ್‌ನ ದಟ್ಟ ಕಾಡುಗಳು, ಕಣಿವೆಗಳು ಮತ್ತು ಕಡಿದಾದ ಗುಡ್ಡಗಾಡು ಪ್ರದೇಶಗಳಲ್ಲಿ ಒಳನುಸುಳುವಿಕೆಗೆ ಸಹಾಯ ಮಾಡುವ ರಹಸ್ಯ ಮಾರ್ಗಗಳ ಬಗ್ಗೆ ಆತನಿಗೆ ಸಂಪೂರ್ಣ ಅರಿವಿತ್ತು.
ಬಾಗು ಖಾನ್ ಹಿಜ್ಬುಲ್ ಮುಜಾಹಿದೀನ್‌ನ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದ. ಗುರೇಜ್ ಮತ್ತು ಸುತ್ತಮುತ್ತಲಿನ ವಲಯಗಳಲ್ಲಿ ಗಡಿಯಾಚೆಗಿನ ಒಳನುಸುಳುವಿಕೆಗೆ ಯೋಜನೆ ರೂಪಿಸಿ, ಇತರ ಭಯೋತ್ಪಾದಕ ಗುಂಪುಗಳಿಗೆ ಸಹಾಯ ಮಾಡುತ್ತಿದ್ದ. ಆತನ ಜ್ಞಾನ ಮತ್ತು ಕೌಶಲ್ಯವು ಹಲವು ಉಗ್ರ ಸಂಘಟನೆಗಳಿಗೆ ಒಳನುಸುಳುವಿಕೆಯನ್ನು ಸುಲಭಗೊಳಿಸಿತ್ತು. 1995ರಿಂದ ಆತ 100ಕ್ಕೂ ಹೆಚ್ಚು ಪಾಕಿಸ್ತಾನಿ ಉಗ್ರರನ್ನು ಭಾರತಕ್ಕೆ ಅಕ್ರಮವಾಗಿ ಒಳನುಸುಳಿಸುವಲ್ಲಿ ಯಶಸ್ವಿಯಾಗಿದ್ದ.
ಗುರೇಜ್‌ನ ಈ ಎನ್‌ಕೌಂಟರ್ ಭಾರತೀಯ ಸೇನೆಯ ಗಡಿ ಭದ್ರತಾ ಕಾರ್ಯಾಚರಣೆಯ ಯಶಸ್ಸಿಗೆ ಸಾಕ್ಷಿಯಾಗಿದೆ. ಬಾಗು ಖಾನ್‌ನಂತಹ ಕುಖ್ಯಾತ ಉಗ್ರನನ್ನು ಹತ್ಯೆಗೊಳಿಸುವ ಮೂಲಕ ಸೇನೆಯು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದೊಡ್ಡ ಗೆಲುವು ಸಾಧಿಸಿದೆ.