‘ಬೆಂಗಳೂರು ಬಂದರು ಧ್ವಂಸ’: ಟ್ರೋಲ್‌ ಆದ ಪಾಕ್‌ ಪ್ರಜೆಯ ಟ್ವೀಟ್‌

Untitled design 2025 05 10t182858.307

ಸೋಶಿಯಲ್‌ ಮೀಡಿಯಾದಲ್ಲಿ ಫೇಕ್‌ ಸುದ್ದಿಗಳ ಹರಿಬಿಡುವಿಕೆ ಈಗ ಸಾಮಾನ್ಯವಾಗಿದೆ. ಆದರೆ, ಪಾಕಿಸ್ತಾನದ ಕೆಲವು ವ್ಯಕ್ತಿಗಳು ಈ ಕಲೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಎಕ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ಪಾಕಿಸ್ತಾನಿಯೊಬ್ಬರು ಮಾಡಿದ ಟ್ವೀಟ್‌ ಈಗ ಸಖತ್‌ ವೈರಲ್‌ ಆಗಿದೆ. ಆತ ಬರೆದದ್ದೇನು? “ಪಾಕಿಸ್ತಾನದ ನೌಕಾಸೇನೆ ಬೆಂಗಳೂರು ಬಂದರನ್ನು ಧ್ವಂಸ ಮಾಡಿದೆ!” ಇದರ ಜೊತೆಗೆ ಪಾಕಿಸ್ತಾನದ ಧ್ವಜದ ಇಮೋಜಿಯನ್ನೂ ಹಾಕಿದ್ದಾನೆ. ಆದರೆ, ಬೆಂಗಳೂರು ಒಂದು ಒಳನಾಡಿನ ನಗರವಾಗಿದ್ದು, ಇಲ್ಲಿ ಯಾವುದೇ ಬಂದರು ಅಥವಾ ಸಮುದ್ರವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಈ ಟ್ವೀಟ್‌ಗೆ ಭಾರತೀಯರು, ವಿಶೇಷವಾಗಿ ಬೆಂಗಳೂರಿಗರು, ತಮಾಷೆಯಾಗಿ ಉತ್ತರಿಸಿದ್ದಾರೆ.

ಪಾಕಿಸ್ತಾನಿಯರ ಫೇಕ್‌ ಸುದ್ದಿಗಳಿಗೆ ಕೊನೆಯೇ ಇಲ್ಲ. ರಫೇಲ್‌ ಜೆಟ್‌ಗಳನ್ನು ಹೊಡೆದುಹಾಕಿದ್ದೇವೆ ಎನ್ನುವುದರಿಂದ ಹಿಡಿದು, ಭಾರತದ ಪೈಲಟ್‌ ಶಿವಾಂಗಿ ಸಿಂಗ್‌ರನ್ನು ಸೆರೆಹಿಡಿದಿದ್ದೇವೆ ಎಂಬುವರೆಗೆ ಎಲ್ಲವೂ ಸುಳ್ಳು. ಆದರೆ, “ಬೆಂಗಳೂರು ಬಂದರು” ಎಂಬ ಈ ಟ್ವೀಟ್‌ ಎಲ್ಲವನ್ನೂ ಮೀರಿಸಿದೆ. ಇದಕ್ಕೆ ಬೆಂಗಳೂರಿಗರು ತಮಾಷೆಯ ರೀತಿಯಲ್ಲಿ ಉತ್ತರಿಸಿದ್ದು, ಈ ಘಟನೆಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡಿದ್ದಾರೆ.

ಒಬ್ಬರು ಟ್ವೀಟ್‌ ಮಾಡಿದ್ದು, “ಬೆಂಗಳೂರು ಬಂದರನ್ನು ಧ್ವಂಸಗೊಳಿಸಿದ್ದಕ್ಕಾಗಿ ಪಾಕಿಸ್ತಾನಕ್ಕೆ ಅಭಿನಂದನೆಗಳು ಎಂದಿದ್ದಾರೆ. ಆದರೆ, ಇನ್ನೊಬ್ಬರು, “ಪಾಕಿಸ್ತಾನದ ದಾಳಿಯನ್ನು ಮೊದಲೇ ಗಮನಿಸಿ ನಮ್ಮ ಡಿಸಿಎಂ ಸುರಂಗ ರಸ್ತೆಯ ಯೋಜನೆ ಮಾಡಿದ್ದಾರೆ!” ಎಂದು ತಮಾಷೆ ಮಾಡಿದ್ದಾರೆ.

“ಹಲಸೂರು ಸರೋವರದ ಬಳಿಯ ಬೆಂಗಳೂರು ಬಂದರು ನಾಶವಾಗಿದೆ! ಬೆಂಗಳೂರಿಗರು ನಡುಗುತ್ತಿದ್ದಾರೆ!” ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಕೆಲವರು ತಮ್ಮ ಕಚೇರಿಯಿಂದ ಬಂದ ಮೇಲ್‌ನಂತೆ ಟ್ವೀಟ್‌ ಮಾಡಿದ್ದಾರೆ. “ಬೆಂಗಳೂರು ಬಂದರಿನ ಧ್ವಂಸದ ಬಗ್ಗೆ ಕೇಳಿ ನಮಗೆ ಬೇಸರವಾಯಿತು. ಆದ್ದರಿಂದ, ವರ್ಕ್‌ ಫ್ರಂ ಹೋಮ್‌ ಮುಂದುವರೆಸಿ!” ಎಂದಿದ್ದಾರೆ.

ಇನ್ನೊಬ್ಬರು, “ಆಘಾತಕಾರಿ ಸುದ್ದಿ! ಪಾಟ್ನಾ ಮತ್ತು ಬೆಂಗಳೂರು ಬಂದರುಗಳು ಧ್ವಂಸಗೊಂಡಿವೆ. ಕೋರಮಂಗಲ ಬೀಚ್‌ನ ಸಮುದ್ರ ಬಂದರಿನ ಈ ಘಟನೆಗೆ ಮೋದಿಯವರು ರಾಜೀನಾಮೆ ಕೊಡಬೇಕು!” ಎಂದು ಟ್ರೋಲ್‌ ಮಾಡಿದ್ದಾರೆ. “ಪಾಕಿಸ್ತಾನದ ಕ್ಷಿಪಣಿಯು ವೃಷಭಾವತಿ ಸಮುದ್ರದ ಬಳಿಯ ಬೆಂಗಳೂರು ಬಂದರಿಗೆ ತಾಗಿದೆ. ಸಮುದ್ರದಲ್ಲಿ ಅವಶೇಷಗಳು ತೇಲುತ್ತಿವೆ!” ಎಂದು ಮತ್ತೊಬ್ಬರು ತಮಾಷೆಯಾಗಿ ಬರೆದಿದ್ದಾರೆ.

“ಕುಂದಲಹಳ್ಳಿ, ಹೆಬ್ಬಾಳ, ಸಿಲ್ಕ್‌ ಬೋರ್ಡ್‌ ಬಂದರುಗಳು ಪಾಕಿಸ್ತಾನದ 7ನೇ ತಲೆಮಾರಿನ ಫೈಟರ್‌ ಜೆಟ್‌ಗಳಿಂದ ಸುರಕ್ಷಿತವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ!” ಎಂದು ಕಾಮೆಂಟ್‌ ಬಂದಿದೆ. ಒಂದು ಗಂಭೀರವಾದ ಟ್ವೀಟ್‌ನಲ್ಲಿ, “ಪಾಕಿಸ್ತಾಬಿಯರು ಬೆಂಗಳೂರು ಬಂದರನ್ನು ಧ್ವಂಸಗೊಳಿಸಿ ಸುರಂಗ ರಸ್ತೆಗೆ ದಾರಿಮಾಡಿಕೊಟ್ಟಿದ್ದಾರೆ. ನಮ್ಮ ಮೂಲಸೌಕರ್ಯವನ್ನು ಒಂದು ದಶಕ ಮುಂದಕ್ಕೆ ಕೊಂಡೊಯ್ದಿದ್ದಾರೆ!” ಎಂದು ಸಿಟಿಜನ್‌ ಮೂವ್‌ಮೆಂಟ್‌ ಖಾತೆಯಿಂದ ಬಂದಿದೆ.

ಈ ಟ್ವೀಟ್‌ಗಳನ್ನು ಓದಿದವರು, “ಇಂಥ ಕಠಿಣ ಸಮಯದಲ್ಲಿ ಇದು ಅತ್ಯಂತ ತಮಾಷೆಯ ಟ್ವೀಟ್‌!” ಎಂದು ಕಾಮೆಂಟ್‌ ಮಾಡಿದ್ದಾರೆ. “ಅಯ್ಯೋ, ಇನ್ನು ಮುಂದೆ ಬೆಂಗಳೂರಿನ ಬೋಟ್‌ ಮೆಟ್ರೋ ಬಳಸಲು ಆಗುವುದಿಲ್ಲ!” ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ.

Exit mobile version