ಪಹಲ್ಗಾಮ್ ದುರಂತಕ್ಕೆ ನಾಳೆಗೆ ಒಂದು ವರ್ಷ: ಭಾರತೀಯ ಸೇನೆಯಿಂದ ‘ಆಪರೇಷನ್ ಸಿಂಧೂರ’ ಸ್ಮರಣೆ

Untitled design 2026 04 21T170850.733

ನವದೆಹಲಿ: ಜಮ್ಮು-ಕಾಶ್ಮೀರದ ಸುಂದರ ಪ್ರವಾಸಿ ತಾಣ ಪಹಲ್ಗಾಮ್ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ನಾಳೆ (ಏಪ್ರಿಲ್ 22) ಒಂದು ವರ್ಷ ಪೂರೈಸುತ್ತಿದೆ. 2025ರಲ್ಲಿ ನಡೆದ ಈ ದುರಂತದಲ್ಲಿ 26 ನಿರಪರಾಧಿ ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದರು. ಈ ಹಿನ್ನೆಲೆ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ವನ್ನು ನೆನಪಿಸಿಕೊಂಡು, ರಾಷ್ಟ್ರದ ಏಕತೆ ಹಾಗೂ ಭಯೋತ್ಪಾದನೆ ವಿರುದ್ಧದ ಕಠಿಣ ನಿಲುವಿನ ಕುರಿತು ಒಂದು ಸಂದೇಶ ನೀಡಿದೆ.

ಆ ದಿನದ ಘಟನೆ ದೇಶದ ಜನತೆಯ ಮನಸ್ಸಿನಲ್ಲಿ ಗಾಯ ಮಾಡಿಬಿಟ್ಟಿದೆ. ಪಹಲ್ಗಾಮ್ ಸಮೀಪದ ಸುಂದರ ಮೇವುಗಾವಲು ಪ್ರದೇಶವಾದ ಬೈಸರನ್ ವ್ಯಾಲಿಗೆ ಪ್ರವಾಸಕ್ಕೆ ತೆರಳಿದ್ದವರ ಮೇಲೆ ಅಚಾನಕ್ ಉಗ್ರರು ದಾಳಿ ನಡೆಸಿದರು. ಹಸಿರು ಹೊಲಗಳು, ಪರ್ವತಗಳ ನಡುವೆ ನೆಲೆಸಿರುವ ಈ ಪ್ರದೇಶದಲ್ಲಿ ಕ್ಷಣಾರ್ಧದಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.

ಮೂರು ಮಂದಿ ಉಗ್ರರು ಸೇನಾ ವೇಷದಲ್ಲಿ ಸ್ಥಳಕ್ಕೆ ನುಗ್ಗಿದ್ದರು. ಅವರ ವೇಷಭೂಷಣವನ್ನು ನೋಡಿ ಪ್ರವಾಸಿಗರು ಅವರನ್ನು ನಿಜವಾದ ಸೈನಿಕರೆಂದು ಭಾವಿಸಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ನಿಜಸ್ವರೂಪ ಬಹಿರಂಗವಾಯಿತು. ಉಗ್ರರು ಪ್ರವಾಸಿಗರನ್ನು ಒಟ್ಟುಗೂಡಿಸಿ ಪುರುಷರು ಮತ್ತು ಮಹಿಳೆಯರನ್ನು ಬೇರೆ ಬೇರೆ ನಿಲ್ಲಿಸಿದ್ದರು. ನಂತರ ಪುರುಷರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ಆರಂಭಿಸಿದರು.

ದಾಳಿಯ ವೇಳೆ ಉಗ್ರರು ವ್ಯಕ್ತಿಗಳ ಧರ್ಮವನ್ನು ಗುರುತಿಸಲು ಪ್ರಯತ್ನಿಸಿದ್ದರು. “ಕಲಿಮಾ ಹೇಳು” ಎಂದು ಕೇಳಿ, ಅದನ್ನು ಹೇಳದವರನ್ನು ಅಥವಾ ಗುರುತಿನ ಚೀಟಿಗಳ ಆಧಾರದ ಮೇಲೆ ಮುಸ್ಲಿಮೇತರರೆಂದು ಗುರುತಿಸಿ ಸಾಲಾಗಿ ನಿಲ್ಲಿಸಿ ಗುಂಡಿಕ್ಕಿ ಕೊಂದಿದ್ದರು. ಸುಮಾರು 20 ನಿಮಿಷಗಳ ಕಾಲ ನಡೆದ ಈ ಕ್ರೂರ ಹತ್ಯಾಕಾಂಡದಲ್ಲಿ ಹಲವರು ಸ್ಥಳದಲ್ಲೇ ಸಾವನ್ನಪ್ಪಿದರು. ಕೆಲವರು ಪಾರಾಗಲು ಪ್ರಯತ್ನಿಸಿದರೂ, ಅವರ ಮೇಲೂ ಗುಂಡಿನ ದಾಳಿ ನಡೆಯಿತು.

ಭಯಭೀತರಾದ ಪ್ರವಾಸಿಗರು ತಮ್ಮ ಜೀವ ಉಳಿಸಿಕೊಳ್ಳಲು ಹತ್ತಿರದ ಗುಡಾರಗಳಲ್ಲಿ ಅಡಗಿಕೊಂಡಿದ್ದರು. ಆದರೆ ಉಗ್ರರು ಅಲ್ಲಿ ಹೋಗಿ ಪುರುಷರನ್ನು ಹೊರಗೆ ಕರೆದು ಮತ್ತೆ ಪರಿಶೀಲನೆ ನಡೆಸಿ ಹತ್ಯೆಗೈದರು. ಈ ದಾಳಿಯ ಕ್ರೂರತೆ ಮಾನವೀಯ ಮಿತಿಗಳನ್ನು ಮೀರಿ ಹೋಗಿತ್ತು.

ಈ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್-ಎ-ತೈಬಾ ಗೆ ಸೇರಿದ ಘಟಕ ‘ರೆಸಿಸ್ಟೆನ್ಸ್ ಫ್ರಂಟ್’ ಹೊತ್ತುಕೊಂಡಿತ್ತು. ಘಟನೆಯ ನಂತರ ಭದ್ರತಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡವು.

ಈ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಹೆಸರಿನ ಪ್ರತೀಕಾರಾಕ ಕಾರ್ಯಾಚರಣೆ ನಡೆಸಿ, ಪಾಕ್ ಆಧಾರಿತ ಉಗ್ರ ನೆಲೆಗಳನ್ನು ಗುರಿಯಾಗಿಸಿತು. ಈ ಕಾರ್ಯಾಚರಣೆಯ ಮೂಲಕ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಿದಂತೆ ಸಂದೇಶ ನೀಡಲಾಗಿತ್ತು.

ಈ ಘಟನೆಯಿಂದಾಗಿ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದು, ಅವರ ನೋವು ಇಂದಿಗೂ ಕಡಿಮೆಯಾಗಿಲ್ಲ. ಒಂದು ವರ್ಷ ಕಳೆದರೂ, ಆ ದಿನದ ನೆನಪುಗಳು ಅವರ ಮನಸ್ಸಿನಲ್ಲಿ ಇನ್ನು ಗಾಯಗಳಂತೆ ಉಳಿದಿವೆ. ಕೆಲವರು ತಮ್ಮ ಜೀವನವನ್ನು ಪುನಃ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದರೂ, ಕಳೆದುಕೊಂಡವರ ನೆನಪು ಅವರನ್ನು ಬಿಡುವುದಿಲ್ಲ.

ಈ ಹಿನ್ನೆಲೆ ಭಾರತೀಯ ಸೇನೆ ತನ್ನ ಸಂದೇಶದಲ್ಲಿ “ಮಾನವೀಯತೆ ಮಿತಿಗಳನ್ನು ಮೀರುವಾಗ ಪ್ರತಿಕ್ರಿಯೆ ಕಠಿಣವಾಗುತ್ತದೆ. ದೇಶದ ಭದ್ರತೆ ಹಾಗೂ ನಾಗರಿಕರ ರಕ್ಷಣೆಗೆ ನಾವು ಸದಾ ಸಜ್ಜಾಗಿದ್ದೇವೆ” ಎಂದು ತಿಳಿಸಿದೆ. ಜೊತೆಗೆ, ಇಂತಹ ದಾಳಿಗಳಿಗೆ ಭಾರತ ಒಂದಾಗಿ ನಿಂತು ಪ್ರತಿಕ್ರಿಯಿಸುವುದಾಗಿ ಎಚ್ಚರಿಕೆ ನೀಡಿದೆ.

Exit mobile version