‘ವಂದೇ ಮಾತರಂ’ ಕಡ್ಡಾಯವಲ್ಲ, ದೇಶಭಕ್ತಿಯನ್ನು ಪ್ರಶ್ನಿಸಬೇಡಿ: ಅಸಾದುದ್ದೀನ್ ಓವೈಸಿ

Untitled design 2025 12 09T201248.572

ನವದೆಹಲಿ: ಲೋಕಸಭೆಯಲ್ಲಿ ವಂದೇ ಮಾತರಂ ಕುರಿತು ನಡೆದ ಚರ್ಚೆ ಮಂಗಳವಾರ ತೀವ್ರ ಸ್ವರೂಪಕ್ಕರ ತಿರುಗಿದೆ. ಈ ಸಂದರ್ಭ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶಭಕ್ತಿ ಎಂಬುದು ಕೇವಲ ಒಂದು ಹಾಡಿನ ಮೂಲಕ ಅಳೆಯುವಂಥ ಭಾವನೆ ಅಲ್ಲ ಎಂದು ಹೇಳಿದ್ದಾರೆ.

ಓವೈಸಿ ಅವರು ತಮ್ಮ ಭಾಷಣದಲ್ಲಿ “ನಾವು ಮುಸ್ಲಿಮರು ಅಲ್ಲಾ ಒಬ್ಬನನ್ನೇ ಆರಾಧಿಸುತ್ತೇವೆ. ನಮ್ಮ ಧರ್ಮದಲ್ಲಿ ಸೃಷ್ಟಿಕರ್ತನ ಹೊರತುಪಡಿಸಿ ಭೂಮಿ, ತಾಯಿ ಅಥವಾ ಬೇರೆ ಯಾವುದನ್ನೂ ಪೂಜಿಸುವ ಸಂಪ್ರದಾಯವಿಲ್ಲ. ಅದರಿಂದ ನಾವು ಭಾರತವನ್ನು ಪ್ರೀತಿಸುತ್ತಿಲ್ಲವೆ? ಅಥವಾ ದೇಶಭಕ್ತಿ ಕಡಿಮೆಯೇ?” ಎಂದು ಪ್ರಶ್ನಿಸಿದ ಅವರು, ರಾಷ್ಟ್ರಪ್ರೇಮವನ್ನು ಕೇವಲ ಒಂದು ಭಕ್ತಿ ಗೀತೆಗೆ ಸೀಮಿತಗೊಳಿಸಲಾಗುವುದಿಲ್ಲ ಎಂದರು.

ಸಂವಿಧಾನದ 25ನೇ ವಿಧಿಯನ್ನು ಉಲ್ಲೇಖಿಸಿದ ಓವೈಸಿ, “ನಮ್ಮ ದೇಶದ ಸಂವಿಧಾನವು We the People of India ಎಂದು ಪ್ರಾರಂಭವಾಗುತ್ತದೆ, ಯಾವುದೇ ದೇವಿಯ ಅಥವಾ ದೇವರ ಹೆಸರಿನಿಂದ ಅಲ್ಲ.. ಧರ್ಮ ಸ್ವಾತಂತ್ರ್ಯ ನಮ್ಮ ಮೂಲಭೂತ ಹಕ್ಕು. ಹೀಗಾಗಿ ಯಾವ ಹಾಡನ್ನೂ, ಯಾವ ವಿಧಿಯನ್ನೂ ಬಲವಂತವಾಗಿ ಪಾಲಿಸಬೇಕೆಂದು ಒತ್ತಾಯಿಸುವಂತಿಲ್ಲ” ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಓವೈಸಿ ತಮ್ಮ ಭಾಷಣದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿದ ಹಲವು ಮುಸ್ಲಿಂ ನಾಯಕರ ತ್ಯಾಗವನ್ನು ಸ್ಮರಿಸಿದರು. ಮೌಲ್ವಿ ಅಲ್ಲಾವುದ್ದೀನ್, ತುರೇಬಾಜ್ ಖಾನ್, ಟಿಪ್ಪು ಸುಲ್ತಾನ್ ಮುಂತಾದ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿದ ಅವರು, “ಈ ಹೋರಾಟಗಾರರು ದೇಶಕ್ಕಾಗಿ ಪ್ರಾಣ ಅರ್ಪಿಸಿದರು. ಆದರೆ ವಂದೇ ಮಾತರಂ ಹಾಡಿರಲಿಲ್ಲ. ಹಾಗಾದರೆ ಅವರ ದೇಶಭಕ್ತಿ ಅನುಮಾನಾಸ್ಪದವಾ?” ಎಂದು ಪ್ರಶ್ನಿಸಿದರು.

ಮುಂದುವರೆಸಿದ ಅವರು, “ದೇಶಭಕ್ತಿಯ ಅರ್ಥವನ್ನು ಈಗ ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಪರಿಕಲ್ಪನೆ ಮಾಡುತ್ತಿದ್ದಾರೆ. ವಂದೇ ಮಾತರಂ ಹಾಡದಿದ್ದರೆ ರಾಷ್ಟ್ರದ್ರೋಹಿ, ದೇಶವಿರೋಧಿ ಎಂದು ಬಣ್ಣಿಸುವ ರಾಜಕೀಯ ಸಂಸ್ಕೃತಿ ಅಪಾಯಕಾರಿಯಾಗಿದೆ” ಎಂದು ಹೇಳಿದರು.

Exit mobile version