ನಾರ್ವೆ ಪತ್ರಿಕೆಯಲ್ಲಿ ಪ್ರಧಾನಿ ಮೋದಿಯನ್ನು ಹಾವಾಡಿಗನಂತೆ ವ್ಯಂಗ್ಯಚಿತ್ರ ಪ್ರಕಟ

BeFunky collage (55)

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾವಾಡಿಗನ ರೀತಿ ವ್ಯಂಗ್ಯಚಿತ್ರದಲ್ಲಿ ಚಿತ್ರಿಸಿ ನಾರ್ವೆಯ ಪ್ರಮುಖ ದಿನಪತ್ರಿಕೆ ಆಫ್ಟನ್‌ಪೋಸ್ಟನ್ (Aftenposten) ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ವ್ಯಂಗ್ಯಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರತೀಯ ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕೆಯಲ್ಲಿ ಪ್ರಕಟವಾದ ಚಿತ್ರದಲ್ಲಿ ಪ್ರಧಾನಿ ಮೋದಿಯವರನ್ನು ಪುಂಗಿ (ಹಾವು) ಊದುವ ಹಾವಾಡಿಗನಂತೆ ಚಿತ್ರಿಸಲಾಗಿದೆ. ಹಾವಿನ ಬದಲು ಇಂಧನ ಪೈಪ್ ಅನ್ನು ಚಿತ್ರಿಸಿ, ಶೀರ್ಷಿಕೆಯಲ್ಲಿ “ಒಬ್ಬ ಚೋರ ಮತ್ತು ಸ್ವಲ್ಪ ಕಿರಿಕಿರಿ ಉಂಟುಮಾಡುವ ವ್ಯಕ್ತಿ” ಎಂದು ಬರೆಯಲಾಗಿದೆ. ಈ ಚಿತ್ರ ಮತ್ತು ಲೇಖನವು ಭಾರತದ ವಿರುದ್ಧ ವಸಾಹತುಶಾಹಿ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ ಎಂದು ಭಾರತೀಯರು ಆರೋಪಿಸುತ್ತಿದ್ದಾರೆ.

ಘಟನೆಯ ಹಿನ್ನೆಲೆ :

ಪ್ರಧಾನಿ ಮೋದಿ ಅವರು ಇತ್ತೀಚೆಗೆ ನಾರ್ವೆ ಸೇರಿದಂತೆ ಐದು ದೇಶಗಳ ವಿದೇಶ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ನಾರ್ವೆ ಪ್ರಧಾನಿ ಜೋನಸ್ ಸ್ಟೋರ್ ಅವರೊಂದಿಗೆ ಭೇಟಿ ನಡೆಸಿದ್ದರು. ಆದರೆ ಒಂದು ಪತ್ರಕರ್ತೆಯು ಪ್ರಧಾನಿ ಮೋದಿಯವರಿಗೆ ಮಾನವ ಹಕ್ಕುಗಳ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಮೋದಿ ಅವರು ಉತ್ತರಿಸದೆ ಹೊರಟುಹೋಗಿದ್ದರು. ಇದೇ ಸಂದರ್ಭದಲ್ಲಿ ಈ ವ್ಯಂಗ್ಯಚಿತ್ರ ಪ್ರಕಟವಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಚಿತ್ರ ತೀವ್ರ ಚರ್ಚೆಗೆ ಕಾರಣವಾಗಿದೆ. ಅನೇಕರು ಇದನ್ನು “ಜನಾಂಗೀಯ ನಿಂದನೆ”, “ವಸಾಹತುಶಾಹಿ ಮನೋಭಾವ” ಎಂದು ಖಂಡಿಸಿದ್ದಾರೆ. ಒಬ್ಬರು ಎಕ್ಸ್‌ನಲ್ಲಿ ಬರೆದಿದ್ದಾರೆ: “ಇದು ಪತ್ರಿಕೋದ್ಯಮವಲ್ಲ, ಇದು ಜನಾಂಗೀಯ ದ್ವೇಷ. ಭಾರತದ ಬೆಳವಣಿಗೆಯನ್ನು ಸಹಿಸಿಕೊಳ್ಳಲಾರದ ಅವರ ಮನಸ್ಥಿತಿ ಇಲ್ಲಿ ಕಾಣುತ್ತಿದೆ.”

ಮತ್ತೊಬ್ಬರು, “ಪ್ರಧಾನಿ ಮೋದಿಯವರನ್ನು ಹಾವಾಡಿಗನಂತೆ ಚಿತ್ರಿಸುವುದು ಅವಹೇಳನಕಾರಿ. ನಾರ್ವೆ ಪತ್ರಿಕೆಗೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.

ಭಾರತದ ಪ್ರತಿಕ್ರಿಯೆ

ವಿದೇಶಾಂಗ ಸಚಿವಾಲಯವು ಈ ವಿಷಯದಲ್ಲಿ ಗಮನ ಹರಿಸುತ್ತಿದೆ ಎಂದು ತಿಳಿದುಬಂದಿದೆ. ಭಾರತೀಯ ರಾಜತಾಂತ್ರಿಕ ವಲಯಗಳು ಇದನ್ನು “ಅಸಂಸ್ಕೃತ ಮತ್ತು ಅಪ್ರಬುದ್ಧ” ಕ್ರಿಯೆ ಎಂದು ವಿಂಡಿಸುತ್ತಿವೆ. ಈ ಘಟನೆಯು ಭಾರತ-ನಾರ್ವೆ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕವೂ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಅವರು ತಮ್ಮ ಪ್ರವಾಸದ ಸಂದರ್ಭದಲ್ಲಿ ಭಾರತದ ಅಭಿವೃದ್ಧಿ, ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯ ಬಗ್ಗೆ ವಿಶ್ವಕ್ಕೆ ಸಕಾರಾತ್ಮಕ ಸಂದೇಶ ನೀಡಿದ್ದರು. ಆದರೆ ಈ ವ್ಯಂಗ್ಯಚಿತ್ರವು ಅದಕ್ಕೆ ವಿರುದ್ಧವಾದ ಪ್ರತಿಕ್ರಿಯೆಯಾಗಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

Exit mobile version