ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಬ್ಯಾನರ್ ಹಾಗೂ ಪೋಸ್ಟರ್‌ಗಳ ಹಾವಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಟಿವಿಕೆ ಪಕ್ಷ ಮಹತ್ವದ ಮನವಿಯನ್ನು ಮಾಡಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ವಿಜಯೋತ್ಸವದ ಹೆಸರಿನಲ್ಲಿ ರಸ್ತೆ, ಸಾರ್ವಜನಿಕ ಸ್ಥಳ ಹಾಗೂ ಫುಟ್‌ಪಾತ್‌ಗಳಲ್ಲಿ ಬ್ಯಾನರ್, ಪೋಸ್ಟರ್ ಹಾಕಬಾರದು ಎಂದು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ.
ರಾಜಕೀಯ ಪಕ್ಷಗಳು ತಮ್ಮ ನಾಯಕರ ಹಾಗೂ ಗೆದ್ದ ಅಭ್ಯರ್ಥಿಗಳ ಪರವಾಗಿ ದೊಡ್ಡ ಪ್ರಮಾಣದಲ್ಲಿ ಬ್ಯಾನರ್‌ಗಳನ್ನು ಹಾಕುವ ಪದ್ಧತಿ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಟಿವಿಕೆ ಅಭಿಪ್ರಾಯಪಟ್ಟಿದೆ. ನಗರ ಪ್ರದೇಶಗಳಲ್ಲಿ ರಸ್ತೆ ಬದಿಗಳಲ್ಲಿ, ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಹಾಗೂ ಜನರು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ಹೇಳಲಾಗಿದೆ.
ಎನ್. ಆನಂದ್ ಅವರು ನೀಡಿರುವ ಹೇಳಿಕೆಯಲ್ಲಿ, ರಾಜಕೀಯ ಆಚರಣೆಗಳು ಜನರ ಜೀವನಕ್ಕೆ ತೊಂದರೆ ಆಗಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಹಾಕುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತದೆ.
ಕೇವಲ ರಾಜಕೀಯ ಕಾರ್ಯಕ್ರಮಗಳಷ್ಟೇ ಅಲ್ಲದೆ, ಹುಟ್ಟುಹಬ್ಬ, ಕುಟುಂಬ ಸಮಾರಂಭ ಅಥವಾ ಖಾಸಗಿ ಆಚರಣೆಗಳ ಹೆಸರಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಹಾಕಬಾರದು ಎಂದು ಟಿವಿಕೆ ಮನವಿ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರ ಹುಟ್ಟುಹಬ್ಬದ ವೇಳೆ ನಗರದೆಲ್ಲೆಡೆ ಫ್ಲೆಕ್ಸ್‌ಗಳನ್ನು ಹಾಕುವುದು ಹೆಚ್ಚಾಗಿದೆ. ಇದರಿಂದ ಜನರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಟಿವಿಕೆ ಅಭಿಪ್ರಾಯಪಟ್ಟಿದೆ.
ಫುಟ್‌ಪಾತ್‌ಗಳಲ್ಲಿ ಬ್ಯಾನರ್ ಹಾಕುವ ಪ್ರವೃತ್ತಿಯನ್ನೂ ಟಿವಿಕೆ ತೀವ್ರವಾಗಿ ಖಂಡಿಸಿದೆ. ಪಾದಚಾರಿಗಳು ನಡೆಯಲು ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ರಾಜಕೀಯ ಅಥವಾ ಖಾಸಗಿ ಜಾಹೀರಾತುಗಳಿಗಾಗಿ ಬಳಸುವುದು ಸರಿಯಲ್ಲ ಎಂದು ಎನ್. ಆನಂದ್ ಹೇಳಿದ್ದಾರೆ.
தலைமை நிலையச் செயலக அறிவிப்பு
கழகத் தோழர்கள் அனைவருக்கும் வணக்கம்.
தமிழ்நாட்டு மக்களின் நலன் ஒன்றையே குறிக்கோளாகக் கொண்டு தொடங்கப்பட்டதுதான் தமிழக வெற்றிக் கழகம். தமிழ்நாட்டு மக்களின் ஏகோபித்த நம்பிக்கையைப் பெற்ற, தமிழ்ச் சொந்தங்களின் குடும்பத்தில் ஒருவராக இருக்கக்கூடிய…
— TVK Party HQ (@TVKPartyHQ) May 12, 2026
ಈ ಹಿನ್ನೆಲೆಯಲ್ಲಿ ಟಿವಿಕೆ ಪಕ್ಷವೇ ಮಾದರಿಯಾಗಲು ನಿರ್ಧರಿಸಿದೆ. ತಮ್ಮ ಪಕ್ಷದಿಂದ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಥವಾ ಪೋಸ್ಟರ್ ಹಾಕುವುದಿಲ್ಲ ಎಂದು ಎನ್. ಆನಂದ್ ಸ್ಪಷ್ಟಪಡಿಸಿದ್ದಾರೆ.
