ಕೋಲ್ಕತ್ತಾ: ದೇಶದಲ್ಲಿ ಈಗಾಗಲೇ ಹಲವು ಬಾರಿ ಆತಂಕ ಮೂಡಿಸಿದ್ದ ಮಾರಣಾಂತಿಕ ‘ನಿಪಾ ವೈರಸ್’ (Nipah Virus) ಈಗ ಪಶ್ಚಿಮ ಬಂಗಾಳದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 25 ವರ್ಷದ ಯುವ ನರ್ಸ್ ಓರ್ವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಘಟನೆಯ ವಿವರ
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬರಾಸಾತ್ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ನರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸೋಂಕಿತರರಿಗೆ ಚಿಕಿತ್ಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಬರಾಸಾತ್‌ನ ಇದೇ ಆಸ್ಪತ್ರೆಯ ಇಬ್ಬರು ನರ್ಸ್‌ಗಳಿಗೆ ಇತ್ತೀಚೆಗೆ ನಿಪಾ ಸೋಂಕು ದೃಢಪಟ್ಟಿತ್ತು. ಇಬ್ಬರಿಗೂ ಪ್ರತ್ಯೇಕ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಒಬ್ಬರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇನ್ನೊಬ್ಬ ನರ್ಸ್ ಸ್ಥಿತಿ ಕೂಡ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಏನಿದು ನಿಪಾ ವೈರಸ್ ?
ನಿಪಾ ಒಂದು ಮಾರಣಾಂತಿಕ ‘ಝೂನೋಟಿಕ್’ (Zoonotic) ವೈರಸ್. ಅಂದರೆ ಇದು ಪ್ರಾಣಿಗಳಿಂದ (ವಿಶೇಷವಾಗಿ ಹಣ್ಣು ತಿನ್ನುವ ಬಾವಲಿಗಳಿಂದ) ಮನುಷ್ಯರಿಗೆ ಹರಡುತ್ತದೆ. ಈ ವೈರಸ್ ಮನುಷ್ಯನ ದೇಹ ಸೇರಿದರೆ ತೀವ್ರವಾದ ಮೆದುಳಿನ ಉರಿಯೂತ (Encephalitis) ಅಥವಾ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಇದು ಕೋವಿಡ್‌ಗಿಂತಲೂ ಹೆಚ್ಚಿನ ಮರಣ ಪ್ರಮಾಣವನ್ನು (Fatality Rate) ಹೊಂದಿರುವುದು ಆತಂಕಕಾರಿ ವಿಷಯ.
ಹರಡುವಿಕೆ ಹೇಗೆ?
-
ಬಾವಲಿಗಳು: ಬಾವಲಿಗಳು ಕಚ್ಚಿ ಅರ್ಧ ತಿಂದ ಹಣ್ಣುಗಳನ್ನು ಮನುಷ್ಯರು ಸೇವಿಸುವುದರಿಂದ.
-
ಪ್ರಾಣಿಗಳ ಸಂಪರ್ಕ: ಸೋಂಕಿತ ಹಂದಿ, ನಾಯಿ ಅಥವಾ ಇತರೆ ಪ್ರಾಣಿಗಳನ್ನ ಮುಟ್ಟುವುದರಿಂದ
-
ಮಾನವ ಸಂಪರ್ಕ: ಸೋಂಕಿತ ವ್ಯಕ್ತಿಯ ಲಾಲಾರಸ, ಮೂತ್ರ ಅಥವಾ ದೈಹಿಕ ದ್ರವಗಳ ಸಂಪರ್ಕದಿಂದ ಇತರರಿಗೆ ಹರಡುತ್ತದೆ.
ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ
ಜ್ವರ, ತಲೆನೋವು, ವಾಂತಿ, ಸ್ನಾಯು ನೋವು ಮತ್ತು ತಲೆತಿರುಗುವಿಕೆ ಆರಂಭಿಕ ಲಕ್ಷಣಗಳಾಗಿವೆ. ಪರಿಸ್ಥಿತಿ ಬಿಗಡಾಯಿಸಿದರೆ ಪ್ರಜ್ಞೆ ತಪ್ಪುವುದು ಅಥವಾ ಉಸಿರಾಟ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ.
ತಡೆಗಟ್ಟುವ ಕ್ರಮ: ಹಣ್ಣುಗಳನ್ನು ಚೆನ್ನಾಗಿ ತೊಳೆದು ತಿನ್ನಿ. ಮರದಿಂದ ಬಿದ್ದ ಅಥವಾ ಪ್ರಾಣಿಗಳು ಕಚ್ಚಿದ ಹಣ್ಣುಗಳನ್ನು ಮುಟ್ಟಬೇಡಿ. ಸೋಂಕಿತರ ಬಳಿ ಹೋಗುವಾಗ ಮಾಸ್ಕ್ ಮತ್ತು ಕೈಗವಸು ಕಡ್ಡಾಯವಾಗಿ ಬಳಸಿ. ವೈಯಕ್ತಿಕ ನೈರ್ಮಲ್ಯಕ್ಕೆ ಆದ್ಯತೆ ನೀಡಿ.
ವಿಶ್ವ ಆರೋಗ್ಯ ಸಂಸ್ಥೆ (WHO) ನಿಫಾವನ್ನು ಅತಿ ಹೆಚ್ಚು ಅಪಾಯಕಾರಿ ರೋಗಕಾರಕಗಳ ಪಟ್ಟಿಯಲ್ಲಿ ಸೇರಿಸಿದೆ. ಭಾರತದಲ್ಲಿ ಈ ಹಿಂದೆ ಕೇರಳದಲ್ಲಿ ನಿಫಾ ಸೋಂಕು ಭಾರಿ ಅವಾಂತರ ಸೃಷ್ಟಿಸಿತ್ತು. ಈಗ ಬಂಗಾಳದಲ್ಲಿ ನರ್ಸ್ ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ. ಸರ್ಕಾರವು ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ (Contact Tracing) ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.
