ಕಠ್ಮಂಡು: ನೇಪಾಳದಲ್ಲಿ 200 ಮತ್ತು 500 ರೂಪಾಯಿ ಮುಖಬೆಲೆಯ ಭಾರತೀಯ ಕರೆನ್ಸಿ ನೋಟುಗಳನ್ನು ಬಳಸಲು ಅವಕಾಶ ನೀಡುವ ಮಹತ್ವದ ನಿರ್ಧಾರವನ್ನು ನೇಪಾಳ ರಾಷ್ಟ್ರ ಬ್ಯಾಂಕ್ (NRB) ತೆಗೆದುಕೊಂಡಿದೆ. 2016ರಲ್ಲಿ ಭಾರತದಲ್ಲಿ ನಡೆದ ನೋಟು ರದ್ದತಿ (ಡೀಮೋನಿಟೈಸೇಶನ್) ನಂತರ ಸುಮಾರು ಒಂದು ದಶಕದಿಂದ 100 ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಭಾರತೀಯ ನೋಟುಗಳಿಗೆ ನೇಪಾಳದಲ್ಲಿ ನಿಷೇಧ ವಿಧಿಸಲಾಗಿತ್ತು. ಈಗ ಆ ನಿಯಮವನ್ನು ಸಡಿಲಗೊಳಿಸಲಾಗಿದ್ದು, ಇದು ಎರಡೂ ದೇಶಗಳ ನಡುವಿನ ವ್ಯಾಪಾರ, ಪ್ರವಾಸೋದ್ಯಮ ಮತ್ತು ಹಣಕಾಸು ವಹಿವಾಟಿಗೆ ಹೊಸ ದಾರಿ ಮಾಡಿಕೊಟ್ಟಿದೆ.
2016ರಲ್ಲಿ ಭಾರತದಲ್ಲಿ ನಡೆದ ನೋಟು ರದ್ದತಿ (Demonetisation) ಬಳಿಕ ನೇಪಾಳದಲ್ಲಿ ₹100 ಮುಖಬೆಲೆಯವರೆಗಿನ ಭಾರತೀಯ ನೋಟುಗಳಿಗೆ ಮಾತ್ರ ಮಾನ್ಯತೆ ನೀಡಲಾಗುತ್ತಿತ್ತು. ಇದರಿಂದ ಭಾರತದಿಂದ ಭೇಟಿ ನೀಡುತ್ತಿದ್ದ ಪ್ರವಾಸಿಗರು, ಗಡಿ ಭಾಗದ ವ್ಯಾಪಾರಿಗಳು ಹಾಗೂ ಎರಡೂ ದೇಶಗಳ ನಡುವೆ ಆಗಾಗ ಸಂಚಾರ ಮಾಡುವ ಜನರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು. ಇದೀಗ ಆ ನಿರ್ಬಂಧವನ್ನು ತೆರವುಗೊಳಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಈ ಕುರಿತು ನೇಪಾಳ ರಾಷ್ಟ್ರ ಬ್ಯಾಂಕ್ (Nepal Rastra Bank – NRB) ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಭಾರತೀಯ ಹಾಗೂ ನೇಪಾಳದ ನಾಗರಿಕರು ತಲಾ ₹25,000 ಮೌಲ್ಯದವರೆಗೆ ₹200 ಮತ್ತು ₹500 ಮುಖಬೆಲೆಯ ಭಾರತೀಯ ಕರೆನ್ಸಿ ನೋಟುಗಳನ್ನು ಹೊಂದಲು ಹಾಗೂ ಸಾಗಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಆದರೆ ಈ ಅನುಮತಿಗೆ ಕೆಲವು ಷರತ್ತುಗಳನ್ನೂ ವಿಧಿಸಲಾಗಿದೆ. ನೇಪಾಳದ ನಾಗರಿಕರು ಭಾರತವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಿಂದ ಭಾರತೀಯ ಕರೆನ್ಸಿಯನ್ನು ನೇಪಾಳಕ್ಕೆ ತರಲು ಅವಕಾಶವಿರುವುದಿಲ್ಲ. ಅದೇ ರೀತಿ ನೇಪಾಳದಿಂದ ಭಾರತವನ್ನು ಹೊರತುಪಡಿಸಿ ಮೂರನೇ ದೇಶಕ್ಕೆ ಭಾರತೀಯ ಕರೆನ್ಸಿಯನ್ನು ಕೊಂಡೊಯ್ಯುವುದಕ್ಕೂ ಅನುಮತಿ ಇಲ್ಲ. ಈ ನಿಯಮಗಳ ಮೂಲಕ ಭಾರತೀಯ ಕರೆನ್ಸಿಯ ದುರುಪಯೋಗವನ್ನು ತಡೆಯುವ ಜೊತೆಗೆ ನಿಯಂತ್ರಿತ ಬಳಕೆಗೆ ಒತ್ತು ನೀಡಲಾಗಿದೆ.
ಈ ಹೊಸ ನಿಯಮದಿಂದ ಭಾರತದಿಂದ ನೇಪಾಳಕ್ಕೆ ಪ್ರವಾಸಕ್ಕೆ ತೆರಳುವ ಪ್ರವಾಸಿಗರಿಗೆ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಇದುವರೆಗೆ ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ₹100 ಮುಖಬೆಲೆಯ ನೋಟುಗಳನ್ನು ಮಾತ್ರ ಕೊಂಡೊಯ್ಯಬೇಕಾಗುತ್ತಿತ್ತು. ಈಗ ₹200 ಹಾಗೂ ₹500 ಮುಖಬೆಲೆಯ ನೋಟುಗಳ ಬಳಕೆಗೆ ಅವಕಾಶ ಸಿಕ್ಕಿರುವುದರಿಂದ ನಗದು ವ್ಯವಹಾರಗಳು ಸುಲಭವಾಗಲಿವೆ.
