NEET ಪೇಪರ್ ಸೋರಿಕೆ ಪ್ರಕರಣ: ಉಪನ್ಯಾಸಕ ಕುಲಕರ್ಣಿ ಬಂಧನ..ಹಗರಣದ ರಹಸ್ಯ ಬಯಲಿಗೆ

Untitled design 2026 05 15T224242.705

ನವದೆಹಲಿ: ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದೆ. ಕೇಂದ್ರ ತನಿಖಾ ದಳ (CBI) ತನಿಖೆಯ ಪ್ರಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರವಾಗಿ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಭಾಗಿಯಾಗಿದ್ದ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಅವರನ್ನು ಬಂಧಿಸಲಾಗಿದೆ. ಪಿ.ವಿ. ಕುಲಕರ್ಣಿ ಈ ಪ್ರಕರಣದ ಪ್ರಮುಖ ಪಾತ್ರಧಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತನಿಖಾಧಿಕಾರಿಗಳ ಪ್ರಾಥಮಿಕ ವರದಿಗಳ ಪ್ರಕಾರ, ಕುಲಕರ್ಣಿ ಅವರಿಗೆ ಪರೀಕ್ಷಾ ವ್ಯವಸ್ಥೆಯ ಕೆಲವು ಹಂತಗಳಲ್ಲಿ ನೇರವಾಗಿ ಪ್ರವೇಶವಿದ್ದುದಾಗಿ ತಿಳಿದುಬಂದಿದೆ. ಈ ಪ್ರವೇಶವನ್ನು ದುರುಪಯೋಗಪಡಿಸಿಕೊಂಡು ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಾಧ್ಯತೆ ಇರಬಹುದು ಎಂದು CBI ಪರಿಶೀಲಿಸುತ್ತಿದೆ.

ಕೋಚಿಂಗ್ ಕ್ಲಾಸ್ ಮೂಲಕ ಅಕ್ರಮ ಚಟುವಟಿಕೆ?

ಮಾಹಿತಿಯ ಪ್ರಕಾರ, 2026ರ ಏಪ್ರಿಲ್ ಕೊನೆಯ ವಾರದಲ್ಲೇ ಕುಲಕರ್ಣಿ ಈ ಅಕ್ರಮದ ಬಗ್ಗೆ ಯೋಜನೆ ರೂಪಿಸಿದ್ದರೆಂದು ಶಂಕಿಸಲಾಗಿದೆ. ಈ ಕಾರ್ಯದಲ್ಲಿ ಈಗಾಗಲೇ ಬಂಧಿತಳಾಗಿರುವ ಮನಿಷಾ ವಾಘಾರೆ ಅವರ ಸಹಕಾರವೂ ಇರಬಹುದು ಎಂದು ತನಿಖೆಯಲ್ಲಿ ತಿಳಿದು ಬಂದಿದೆ..

ಪುಣೆಯಲ್ಲಿ ತಮ್ಮ ನಿವಾಸದಲ್ಲಿ ಅವರು ಆಯ್ದ ಕೆಲ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್ ಕ್ಲಾಸ್ ನಡೆಸುತ್ತಿದ್ದರೆಂಬ ಮಾಹಿತಿ ಹೊರಬಂದಿದೆ. ಈ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಗಳು, ಆಯ್ಕೆಗಳು ಹಾಗೂ ಸರಿಯಾದ ಉತ್ತರಗಳನ್ನು ಬರೆಸಲಾಗುತ್ತಿತ್ತು ಎಂಬ ಆರೋಪವಿದೆ. ಬಳಿಕ ಮೇ 3ರಂದು ನಡೆದ ಅಧಿಕೃತ NEET ಪರೀಕ್ಷೆಯ ಪ್ರಶ್ನೆಗಳಿಗೂ ಹಾಗೂ ಈ ತರಗತಿಗಳಲ್ಲಿ ನೀಡಲಾದ ವಿಷಯಕ್ಕೂ ಅಚ್ಚರಿಯ ಮಟ್ಟದ ಸಾಮ್ಯತೆ ಕಂಡುಬಂದಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ದೇಶವ್ಯಾಪಿ ಬಂಧನಗಳು

ಈ ಪ್ರಕರಣದ ಸಂಬಂಧ CBI ಇದುವರೆಗೆ ಜೈಪುರ, ಗುರುಗ್ರಾಮ, ನಾಸಿಕ್, ಪುಣೆ ಮತ್ತು ಅಹಿಲ್ಯನಗರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಒಟ್ಟು 7 ಮಂದಿಯನ್ನು ಬಂಧಿಸಿದೆ. ಬಂಧಿತರಲ್ಲಿ ಕೆಲವರನ್ನು ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ 7 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇತ್ತೀಚೆಗೆ ಬಂಧಿಸಲಾದ ಇಬ್ಬರು ಆರೋಪಿಗಳನ್ನು ಪುಣೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ರಿಮಾಂಡ್ ಪಡೆದು ದೆಹಲಿಗೆ ಕರೆದೊಯ್ಯಲಾಗುತ್ತಿದೆ. ಅಲ್ಲಿ ಹೆಚ್ಚಿನ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ಮುಂದುವರಿಕೆ

CBI ಅಧಿಕಾರಿಗಳು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇಡೀ ಪರೀಕ್ಷಾ ವ್ಯವಸ್ಥೆಯ ದುರುಪಯೋಗ ನಡೆದಿದೆಯೇ ಎಂಬುದರ ತನಿಖೆ ಮುಂದುವರಿಸಿದ್ದಾರೆ. ಈ ಹಗರಣದ ಹಿಂದೆ ಇನ್ನೂ ದೊಡ್ಡ ಜಾಲವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

Exit mobile version