ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿಯೊಬ್ಬಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಮೆರಿಕಾ ಮತ್ತು ಇಸ್ರೇಲ್ ಸಂಯುಕ್ತ ವೈಮಾನಿಕ ದಾಳಿಯಲ್ಲಿ ಖಮೇನಿ ಹತ್ಯೆಗೆ ಆಕೆ ಈ ರೀತಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೆನಡಾದಲ್ಲಿ ನಡೆದ ಇರಾನ್ ಆಡಳಿತ ವಿರೋಧಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಈ ಯುವತಿ (ಹೆಸರು ನಯನಾ ರಾಜೀವ್ ಎಂದು ತಿಳಿದುಬಂದಿದೆ) ಖಮೇನಿ ಅವರ ಭಾವಚಿತ್ರವನ್ನು ನೆಲಕ್ಕೆ ಹಾಕಿ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿದ ನಂತರ ಅದರಲ್ಲೇ ತನ್ನ ಸಿಗರೇಟ್ ಹೊತ್ತಿಸಿಕೊಂಡು ಧೂಮಪಾನ ಮಾಡುತ್ತಿರುವ ದೃಶ್ಯವನ್ನು ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೊವನ್ನು ಆಕೆ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವ್ಯೂಸ್, ಶೇರ್‌ಗಳು ಮತ್ತು ಕಾಮೆಂಟ್‌ಗಳೊಂದಿಗೆ ಟ್ರೆಂಡ್ ಆಗಿದೆ.
ಫ್ಯಾನ್ಸ್ ಮತ್ತು ನೆಟಿಗರು ಈ ಕೃತ್ಯವನ್ನು ಬೆಂಬಲಿಸುವವರು ಮತ್ತು ಖಂಡಿಸುವವರು ಎಂದು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದಾರೆ. “ಖಮೇನಿ ದಬ್ಬಾಳಿಕೆಯ ಅಂತ್ಯಕ್ಕೆ ಇದೊಂದು ಸಂಕೇತ”, “ಇದು ಸ್ವಾತಂತ್ರ್ಯದ ಹೋರಾಟ” ಎಂದು ಕೆಲವರು ಬೆಂಬಲಿಸುತ್ತಿದ್ದರೆ, “ಇದು ಅಗೌರವದ ಕೃತ್ಯ” ಎಂದು ಇನ್ನು ಕೆಲವರು ಖಂಡಿಸುತ್ತಿದ್ದಾರೆ.
ಈ ಘಟನೆಯು ಖಮೇನಿ ಹತ್ಯೆಯ ನಂತರ ಜಾಗತಿಕವಾಗಿ ಇರಾನ್ ವಿರೋಧಿ ಭಾವನೆಗಳು ಹೇಗೆ ಹೆಚ್ಚಾಗುತ್ತಿವೆ ಎಂಬುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕೆನಡಾದಲ್ಲಿ ಇರಾನ್ ಆಡಳಿತ ವಿರೋಧಿ ರ್ಯಾಲಿಗಳು ತೀವ್ರಗೊಂಡಿವೆ.
