ಮುಂಬೈ ನಗರದಲ್ಲಿ ಗಣೇಶ ವಿಸರ್ಜನೆಯ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ. ಟ್ರಾಫಿಕ್ ಪೊಲೀಸ್ ಕಂಟ್ರೋಲ್ ರೂಂನ ವಾಟ್ಸ್‌ಆಪ್ ನಂಬರ್‌ಗೆ ಬಂದ ಸಂದೇಶದಲ್ಲಿ, ‘ಲಷ್ಕರ್-ಇ-ಜಿಹಾದ್’ ಎಂಬ ಹೊಸ ಉಗ್ರ ಸಂಘಟನೆಯ ಹೆಸರಿನಲ್ಲಿ ಭಯಾನಕ ಬೆದರಿಕೆ ಹಾಕಲಾಗಿದೆ. ಈ ಸಂದೇಶದ ಪ್ರಕಾರ, 14 ಪಾಕಿಸ್ತಾನಿ ಉಗ್ರರು ಮುಂಬೈಗೆ ನುಗ್ಗಿದ್ದು, 400 ಕೆಜಿ RDX ಸ್ಫೋಟಕಗಳೊಂದಿಗೆ ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಹೇಳಲಾಗಿದೆ.
ಗಣೇಶ ಚತುರ್ಥಿ ಹಬ್ಬದ ಸಂಭ್ರಮಾಚರಣೆಯು ಕಳೆದ 10 ದಿನಗಳಿಂದ ನಡೆಯುತ್ತಿದ್ದು, ನಾಳೆ (ಸೆಪ್ಟೆಂಬರ್ 06) ಕೊನೆಯ ದಿನದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕೋಟ್ಯಂತರ ಜನರು ಸೇರುವ ನಿರೀಕ್ಷೆಯಿದ್ದು, ಉಗ್ರರು ಇದನ್ನೇ ಗುರಿಯಾಗಿಸಿಕೊಂಡಿದ್ದಾರೆ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. ಸಂದೇಶದಲ್ಲಿ, 34 ವಾಹನಗಳಲ್ಲಿ ಮಾನವ ಆತ್ಮಾಹುತಿ ಬಾಂಬ್‌ಗಳನ್ನು ಇರಿಸಿ ಸ್ಫೋಟಿಸುವುದಾಗಿ ಹೇಳಲಾಗಿದ್ದು, 1 ಕೋಟಿ ಜನರನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದೆ.
ಮುಂಬೈ ಪೊಲೀಸರು ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ, ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಆಂಟಿ-ಟೆರರಿಸ್ಟ್ ಸ್ಕ್ವಾಡ್ (ಎಟಿಎಸ್) ಮತ್ತು ಪೊಲೀಸ್ ತಂಡಗಳು ಹೈ ಅಲರ್ಟ್‌ನಲ್ಲಿವೆ. ಶ್ವಾನ ಪಡೆ, ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ವಿವಿಧ ತಂಡಗಳು ನಗರದ ಪ್ರಮುಖ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿವೆ. ಗಣೇಶ ವಿಸರ್ಜನೆಯ ಮಾರ್ಗಗಳು, ಚೌಪತಿ ಬೀಚ್ ಮತ್ತು ಇತರ ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಬೆದರಿಕೆ ಸಂದೇಶವು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯಿಂದ ಬಂದಿರುವಂತೆ ಕಾಣುತ್ತಿದ್ದು, ತನಿಖೆಯನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಈ ಘಟನೆಯು ಮುಂಬೈಯ ಜನರಲ್ಲಿ ಆತಂಕ ಸೃಷ್ಟಿಸಿದ್ದು, ಹಬ್ಬದ ಸಂಭ್ರಮಕ್ಕೆ ಮಸಕ ಬೀಳುವಂತಾಗಿದೆ.
