ಮುಂಬೈನಲ್ಲಿ 20 ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ಆರೋಪಿ ಅರೆಸ್ಟ್

Untitled design 2025 10 30t182306.364

ಮುಂಬೈ: ಭಾರತದ ವಾಣಿಜ್ಯ ರಾಜಧಾನಿ ಮುಂಬೈನ ಪೋವಾಯಿ ಪ್ರದೇಶದಲ್ಲಿ ಇಂದು (ಅಕ್ಟೋಬರ್ 30, 2025) ಮಧ್ಯಾಹ್ನ ಒಂದು ಆಘಾತಕಾರಿ ಘಟನೆ ನಡೆದಿದೆ. ಆರ್‌ಎ ಸ್ಟುಡಿಯೋದಲ್ಲಿ ವ್ಯಕ್ತಿಯೊಬ್ಬ 15-20 ಶಾಲಾ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡ ಘಟನೆ ನಡೆದಿದೆ. ಆದರೆ, ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ.

ಘಟನೆಯ ವಿವರ

ರೋಹಿತ್ ಆರ್ಯ ಎಂಬುವವನು ಆರ್‌ಎ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಮಕ್ಕಳ ಆಡಿಷನ್ ಕಾರ್ಯಕ್ರಮದಲ್ಲಿ ಈ ಕೃತ್ಯವನ್ನು ನಡೆಸಿದ್ದಾನೆ. ಮೊದಲಿಗೆ, 100ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಟ್ಟಡದೊಳಗೆ ಒತ್ತೆಯಾಳಾಗಿರಿಸಿಕೊಂಡಿದ್ದ ಆತ, ಬಳಿಕ 80 ಮಕ್ಕಳನ್ನು ಬಿಡುಗಡೆ ಮಾಡಿದ್ದ. ಆದರೆ, 15-20 ಮಕ್ಕಳನ್ನು ಒತ್ತೆಯಾಳಾಗಿಟ್ಟುಕೊಂಡು, ತನ್ನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಯತ್ನಿಸಿದ. ಈತ ಸ್ಟುಡಿಯೋದ ಸಿಬ್ಬಂದಿಯಾಗಿದ್ದ ಎನ್ನಲಾಗಿದ್ದು, ಮಾನಸಿಕವಾಗಿ ಅಸ್ವಸ್ಥನಿರಬಹುದೆಂದು ಶಂಕಿಸಲಾಗಿದೆ.

ರೋಹಿತ್ ಆರ್ಯ ಈ ಘಟನೆಗೂ ಮುನ್ನ ಒಂದು ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದ. ಈ ವಿಡಿಯೋದಲ್ಲಿ ಆತ, “ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದೇನೆ. ನನ್ನ ತಪ್ಪುಗಳಿಗೆ ನಾನೇ ಜವಾಬ್ದಾರನಾಗಿದ್ದೇನೆ. ನನಗೆ ಕೆಲವು ವ್ಯಕ್ತಿಗಳೊಂದಿಗೆ ಮಾತನಾಡಬೇಕಿದೆ, ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಒಂದು ವೇಳೆ ಇದಕ್ಕೆ ಅವಕಾಶ ನೀಡದಿದ್ದರೆ, ಮಕ್ಕಳಿಗೆ ಹಾನಿಯಾಗಬಹುದು ಮತ್ತು ನಾನೂ ಸಾಯಲಿದ್ದೇನೆ,” ಎಂದು ಹೇಳಿದ್ದಾನೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಮುಂಬೈ ಪೊಲೀಸರು ತಕ್ಷಣ ರಾಪಿಡ್ ರೆಸ್ಪಾನ್ಸ್ ಟೀಮ್‌ನೊಂದಿಗೆ ಸ್ಥಳಕ್ಕೆ ಧಾವಿಸಿದರು. ನಂತರ ಪೊಲೀಸರು, ರೋಹಿತ್ ಆರ್ಯನ ಜೊತೆ ಮಾತುಕತೆ ನಡೆಸಿ, ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಿದರು. ಬಳಿಕ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದರು.

ರೋಹಿತ್ ಆರ್ಯ ಸ್ವತಃ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಮಕ್ಕಳಿಗೆ ನಟನೆಯ ತರಬೇತಿಯನ್ನು ನೀಡುತ್ತಿದ್ದ ಎನ್ನಲಾಗಿದೆ. ಆತನ ವಿಡಿಯೋದಲ್ಲಿ ಗೊಂದಲ ಅಥವಾ ಆತಂಕವಿಲ್ಲದೆ ಸ್ಪಷ್ಟವಾಗಿ ಮಾತನಾಡಿರುವುದು ಕಾಣಬಹುದು. ಆದರೆ, ಆತನ ಈ ಕೃತ್ಯದ ಹಿಂದಿನ ನಿಜವಾದ ಉದ್ದೇಶವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version