ಮುಂಬೈನಲ್ಲಿ ದಾಖಲೆ ಮಳೆ: ಜನಜೀವನ ಅಸ್ತವ್ಯಸ್ತ

Untitled design 2025 05 27t072516.955

ಮುಂಬೈ: ಕಳೆದ 16 ವರ್ಷಗಳಲ್ಲೇ ಮೊದಲ ಬಾರಿಗೆ ಕೇರಳದ ಕರಾವಳಿಗೆ ಮುಂಗಾರು ಮಾರುತಗಳು ಮೇ ತಿಂಗಳಿನಲ್ಲಿ ಪ್ರವೇಶಿಸಿದ್ದು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯೊಂದಿಗೆ ಆರಂಭವಾಗಿವೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈ ಈ ಮೊದಲ ಮುಂಗಾರಿಗೆ ತತ್ತರಿಸಿದ್ದು, ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

75 ವರ್ಷಗಳ ದಾಖಲೆಯ ಮಳೆ
ಸಾಮಾನ್ಯವಾಗಿ ಜೂನ್ 11ರಂದು ಮುಂಬೈಗೆ ಕಾಲಿಡುವ ಮುಂಗಾರು, ಈ ಬಾರಿ 75 ವರ್ಷಗಳಲ್ಲಿ ಮೊದಲ ಬಾರಿಗೆ 15 ದಿನ ಮುಂಚಿತವಾಗಿ, ಮೇ ತಿಂಗಳಿನಲ್ಲಿ ಆಗಮಿಸಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಮುಂಬೈನ ಸಂಚಾರ ವ್ಯವಸ್ಥೆ ಕುಸಿದಿದೆ. ವಡಾಲಾ ರಸ್ತೆ ಮತ್ತು ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್‌ನ ಉಪನಗರ ರೈಲು ಸೇವೆಯನ್ನು ಕೆಲಕಾಲ ಸ್ಥಗಿತಗೊಳಿಸಲಾಯಿತು. ಮಸೀದಿ ನಿಲ್ದಾಣದಲ್ಲಿ ಹಳಿಗಳ ಮೇಲೆ ನೀರು ನಿಂತಿದ್ದರಿಂದ ಹಾರ್ಬರ್ ರೈಲು ಸೇವೆಗೂ ವ್ಯತ್ಯಯವಾಯಿತು. ಸುಮಾರು 250 ವಿಮಾನಗಳ ಸಂಚಾರದಲ್ಲಿಯೂ ತೊಂದರೆಯಾಯಿತು. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುವಂತಾಯಿತು.

1918ರಲ್ಲಿ 279.4 ಮಿ.ಮೀ ಮಳೆಯಾಗಿತ್ತು. ಆದರೆ ಈ ವರ್ಷ 295 ಮಿ.ಮೀ ಮಳೆ ಸುರಿದು, 107 ವರ್ಷಗಳ ದಾಖಲೆಯನ್ನು ಮುರಿಯಿತು. ಮಳೆ ಮುಂದುವರೆಯುವ ಸಾಧ್ಯತೆಯಿಂದ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೊಷಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆ
ಮುಂಬೈ ಮಾತ್ರವಲ್ಲ, ಮಹಾರಾಷ್ಟ್ರದ ಥಾಣೆ, ಪಾಲ್ಘರ್, ಮತ್ತು ಪುಣೆಯಲ್ಲಿ ಭಾರೀ ಮಳೆಯಾಗಿದೆ. ಪುಣೆಯ ಬಾರಾಮತಿ, ಇಂದಾಪುರ, ಮತ್ತು ದೌಂಡಾದಲ್ಲಿ ಕಳೆದ 50 ವರ್ಷಗಳಲ್ಲೇ ಮೇ ತಿಂಗಳಿನಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಸಾಮಾನ್ಯವಾಗಿ ಮಾನ್ಸೂನ್ ಋತುವಿನಲ್ಲಿ 14 ಸೆಂ.ಮೀ ಮಳೆಯಾಗುತ್ತಿದ್ದರೆ, ಈ ಬಾರಿ ಒಂದೇ ದಿನ 13 ಸೆಂ.ಮೀ ಮಳೆ ಸುರಿದಿದೆ. ಇಂದಾಪುರದ 70 ಹಳ್ಳಿಗಳು ಮತ್ತು ಬಾರಾಮತಿಯ 150 ಮನೆಗಳಿಗೆ ನೀರು ನುಗ್ಗಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಥಾಣೆ ಮತ್ತು ಪಾಲ್ಘರ್‌ನಲ್ಲಿ ರಸ್ತೆಗಳನ್ನು ಮುಚ್ಚಲಾಗಿದೆ. ಉಲ್ಹಾಸ್ ನದಿಯ ನೀರಿನ ಮಟ್ಟ ಏರಿಕೆಯಿಂದ ಕಲ್ಯಾಣ್‌-ಮುರ್ಬಾದ್ ರಸ್ತೆಯ ರೈಟೆ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಕೇರಳದಲ್ಲಿ ಮಳೆಯ ಅಬ್ಬರ
ಕೇರಳದ ಉತ್ತರ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಮರಗಳು ಧರೆಗುರುಳಿವೆ. ವಯನಾಡಿನ ಪುಳಂಕುನಿ ಹಳ್ಳಿಯ ಬುಡಕಟ್ಟು ಕುಟುಂಬಗಳನ್ನು ಸುಲ್ತಾನ್ ಬತ್ತೇರಿಯ ನಿರಾಶ್ರಿತ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ತ್ರಿಶೂರ್, ಪಾಲಕ್ಕಡ್, ಕಲ್ಲಿಕೋಟೆ, ಇಡುಕ್ಕಿ, ಕೊಟ್ಟಾಯಂ, ಎರ್ನಾಕುಲಂ, ಮತ್ತು ಕಣ್ಣೂರಿನಲ್ಲಿ ಉತ್ತಮ ಮಳೆಯಾಗಿದ್ದು, ಕೆಲವೆಡೆ ಭೂಕುಸಿತದ ಎಚ್ಚರಿಕೆ ನೀಡಲಾಗಿದೆ.

ಆಂಧ್ರಪ್ರದೇಶದಲ್ಲಿ ಮುಂಗಾರು
ಆಂಧ್ರಪ್ರದೇಶದ ರಾಯಲಸೀಮಾ ಮೂಲಕ ಮುಂಗಾರು ಪ್ರವೇಶಿಸಿದ್ದು, ವಿಜಯವಾಡ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಕರ್ನಾಟಕ, ತಮಿಳುನಾಡು, ಮತ್ತು ತೆಲಂಗಾಣದ ಕೆಲ ಭಾಗಗಳಲ್ಲಿಯೂ ಮಳೆ ಅಬ್ಬರಿಸಿದೆ.

ಮೆಟ್ರೋ ಸ್ಟೇಷನ್‌ನಲ್ಲೂ ಜಲಾವೃತ
ಮುಂಬೈನ ಆಚಾರ್ಯ ಅತ್ರೆ ಚೌಕ ಮೆಟ್ರೋ ನಿಲ್ದಾಣದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮೆಟ್ರೋ ಮಾರ್ಗ 3ರ ಸಂಚಾರ ಸ್ಥಗಿತಗೊಂಡಿದೆ. ನಿಲ್ದಾಣದ ಒಳಗೆ ನೀರು ನಿಂತಿರುವ ವಿಡಿಯೋಗಳು ವೈರಲ್ ಆಗಿವೆ. ಎಸ್ಕಲೇಟರ್‌ನಲ್ಲಿ ನೀರು ಸೋರಿಕೆಯಾಗಿದ್ದು, ಮೇಲ್ಛಾವಣಿ ಕುಸಿದಿರುವ ಘಟನೆಯೂ ನಡೆದಿದೆ.

Exit mobile version