ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ

Untitled design 2026 02 02T164727.311

ಮುಂಬೈ: ಮುಂಬೈನಲ್ಲಿ ಅಪ್ರಾಪ್ತ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಕಳೆದ ಕೇವಲ 36 ಗಂಟೆಗಳ ಅವಧಿಯಲ್ಲಿ ನಗರದ ವಿವಿಧ ಭಾಗಗಳಿಂದ 8 ಬಾಲಕಿಯರು ಸೇರಿದಂತೆ ಒಟ್ಟು 12 ಮಕ್ಕಳು ನಾಪತ್ತೆಯಾಗಿದ್ದಾರೆ. ಈ ಬೆನ್ನಲ್ಲೇ ಮುಂಬೈ ಪೊಲೀಸರು ನಗರದಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಮಕ್ಕಳ ಕಳ್ಳಸಾಗಣೆ ಜಾಲಗಳನ್ನ ಪತ್ತೆಹಚ್ಚಲು ಮುಂದಾಗಿದ್ದಾರೆ.

ನಗರದ ಏಳು ವಿಭಿನ್ನ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ದಾಖಲಾಗಿವೆ. ಶಿವಾಜಿ ನಗರ (4), ಸಕಿನಾಕಾ (2), ಆಂಟೋಪ್ ಹಿಲ್ (2), ಓಶಿವಾರಾ, ಮನ್ಖುರ್ಡ್, ಬಂಗೂರ್ ನಗರ ಮತ್ತು ಘಾಟ್ಕೋಪರ್ ಪ್ರದೇಶಗಳಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಪೋಷಕರ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತಾ (BNS) ಸೆಕ್ಷನ್ 137(2) ರ ಅಡಿಯಲ್ಲಿ ಅಪಹರಣದ ಶಂಕೆಯ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಮಾನವ ಕಳ್ಳಸಾಗಣೆ ಭಯ

ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಮಕ್ಕಳು, ಅದರಲ್ಲೂ ಹದಿಹರೆಯದ ಹೆಣ್ಣುಮಕ್ಕಳು ಕಾಣೆಯಾಗಿರುವುದು ತನಿಖಾ ಸಂಸ್ಥೆಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಇದು ವ್ಯವಸ್ಥಿತವಾಗಿ ನಡೆಯುತ್ತಿರುವ ಮಾನವ ಕಳ್ಳಸಾಗಣೆ (Human Trafficking) ಜಾಲದ ಕೆಲಸವಿರಬಹುದು ಎಂದು ಶಂಕಿಸಲಾಗಿದೆ. ಸದ್ಯಕ್ಕೆ ಯಾವುದೇ ಕುಟುಂಬಕ್ಕೂ ಕಿಡ್ನಾಪ್‌ ಕರೆಗಳು ಬಾರದಿರುವುದು ಈ ಶಂಕೆಯನ್ನು ಮತ್ತಷ್ಟು ಬಲಪಡಿಸಿದೆ. ಕೊಳೆಗೇರಿಗಳು ಪ್ರದೇಶಗಳು, ಜನವಿಲ್ಲದ ಮಾರುಕಟ್ಟೆಗಳು ಮತ್ತು ರೈಲ್ವೆ ನಿಲ್ದಾಣಗಳೇ ದುಷ್ಕರ್ಮಿಗಳ ಪ್ರಮುಖ ಗುರಿಯಾಗಿವೆ.

ಆತಂಕಕಾರಿ ಅಂಕಿಅಂಶಗಳು

ಮುಂಬೈ ಪೊಲೀಸರ ಇತ್ತೀಚಿನ ದಾಖಲೆಗಳು ಭಯಾನಕ ಚಿತ್ರಣವನ್ನು ನೀಡುತ್ತಿವೆ. ಮುಂಬೈ ಪೊಲೀಸರು ಇತ್ತೀಚಿನ ದಾಖಲೆಯಲ್ಲಿ ತಿಳಿಸಿದಂತೆ 2025ರ ಜೂನ್‌ನಿಂದ ಡಿಸೆಂಬರ್ ಅವಧಿಯಲ್ಲಿ ಒಟ್ಟು 145 ಮಕ್ಕಳು ನಾಪತ್ತೆಯಾಗಿದ್ದಾರೆ. ಇವರಲ್ಲಿ 93 ಮಂದಿ ಹುಡುಗಿಯರೇ ಆಗಿದ್ದಾರೆ. ಇನ್ನು ನವೆಂಬರ್ 1 ರಿಂದ ಡಿಸೆಂಬರ್ 6 ರ ನಡುವೆ ದಾಖಲಾದ 82 ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಅಪ್ರಾಪ್ತರೇ ಇದ್ದಾರೆ.

ಪೊಲೀಸರ ಬಿಗಿ ಕಣ್ಗಾವಲು

ಮಕ್ಕಳನ್ನು ಪತ್ತೆಹಚ್ಚಲು ಮುಂಬೈ ಪೊಲೀಸರು ಸಿಸಿಟಿವಿ ಕಣ್ಗಾವಲು, ಪಾದಚಾರಿ ಗಸ್ತು ಮತ್ತು ತಾಂತ್ರಿಕ ಮೇಲ್ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ನಾಪತ್ತೆಯಾದ ಮಕ್ಕಳ ಭಾವಚಿತ್ರಗಳನ್ನು ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಆಸ್ಪತ್ರೆಗಳಲ್ಲಿ ತೋರಿಸಿ ಪತ್ತೆಲಾಗುತ್ತಿದೆ. ಅವುಗಳಲ್ಲಿಕೆಲವು ಮಕ್ಕಳನ್ನು ಈಗಾಗಲೇ ಸಿಕ್ಕಿದು ಪೋಷಕರಿಗೆ ಒಪ್ಪಿಸಲಾಗಿದ್ದರೂ, ಉಳಿದವರ ಶೋಧ ಕಾರ್ಯ ತೀವ್ರಗತಿಯಲ್ಲಿ ಸಾಗಿದೆ.

ನಗರದ ವಲಸೆ ಕಾರ್ಮಿಕರು ಹೆಚ್ಚಿರುವ ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ಇಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಂಘಟಿತ ಕ್ರೈಮ್ ಗ್ಯಾಂಗ್‌ಗಳ ಬಗ್ಗೆ ಸುಳಿವು ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

Exit mobile version