ಮದುವೆ ನಂತ್ರ ಅನ್ಯರ ಜತೆ ಅಶ್ಲೀಲವಾಗಿ ಮಾತನಾಡುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್

Untitled design (28)

ಭೋಪಾಲ್‌: ಮದುವೆಯಾದ ವ್ಯಕ್ತಿಯೊಬ್ಬರು ಪರಪುರುಷ ಅಥವಾ ಪರ ಸ್ತ್ರೀಯೊಂದಿಗೆ ಅಶ್ಲೀಲ ಸಂಭಾಷಣೆ ನಡೆಸುವುದು ನೈತಿಕತೆಯ ದೃಷ್ಟಿಯಿಂದ ಸಹಿಸಲು ಅಸಾಧ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಕುರಿತು ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಪೀಠ, ವಿವಾಹಿತರು ಪರ ಪುರುಷ ಅಥವಾ ಪರ ಸ್ತ್ರೀಯೊಂದಿಗೆ ತಮ್ಮ ವೈಯಕ್ತಿಕ ಲೈಂಗಿಕ ಜೀವನದ ಬಗ್ಗೆ ಚರ್ಚೆ ಮಾಡುವುದು ಪತಿ-ಪತ್ನಿಯ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ವಿವೇಕ್‌ ರುಸಿಯಾ ಹಾಗೂ ಗಜೇಂದ್ರ ಸಿಂಗ್‌ ಅವರಿದ್ದ ನ್ಯಾಯಪೀಠ, “ಮದುವೆಯಾದ ಹೆಣ್ಣು ತನ್ನ ಪುರುಷ ಸ್ನೇಹಿತನೊಂದಿಗೆ ತನ್ನ ಗಂಡನ ಜತೆಗಿನ ಲೈಂಗಿಕ ಜೀವನದ ಬಗ್ಗೆ ಚರ್ಚೆ ನಡೆಸುವುದು ಯಾವ ಪತಿಯೂ ಸಹಿಸವುದಿಲ್ಲ” ಎಂಬುದಾಗಿ ಅಭಿಪ್ರಾಯಪಟ್ಟಿದೆ.

ವಿಚ್ಚೇದನಕ್ಕೆ ಕಾರಣವಾದ ಅಶ್ಲೀಲ ಚಾಟ್

ಈ ಪ್ರಕರಣದಲ್ಲಿ, ಪತ್ನಿ ತನ್ನ ಮಾಜಿ ಪ್ರೇಮಿಯೊಂದಿಗೆ ಪ್ರತಿದಿನವೂ ಅಶ್ಲೀಲ ಚಾಟ್ ಮಾಡುತ್ತಿದ್ದರು ಎಂದು ಪತಿ ಆರೋಪಿಸಿದ್ದರು. ಇದರಿಂದ ಕುಟುಂಬದಲ್ಲಿ ಕಲಹ ಉಂಟಾಗಿದ್ದು, ಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ ಈ ವಿಚಾರದಲ್ಲಿ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಿತ್ತು. ಆದರೆ, ಈ ತೀರ್ಪನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೈಕೋರ್ಟ್ ಈ ಪ್ರಕರಣವನ್ನು ಪರಿಶೀಲಿಸಿ, “ವಿಚ್ಛೇದನವನ್ನು ಪ್ರಶ್ನಿಸಲು ಮಹಿಳೆಗೆ ಯಾವುದೇ ಆಧಾರವಿಲ್ಲ. ಪತಿಯ ಪರ ನೀಡಿದ ಸಾಕ್ಷ್ಯಗಳು ಈ ಸಂಬಂಧ ದೃಢಪಡಿಸುತ್ತವೆ. ಸಭ್ಯತೆ ಮೀರಿದ ಚಾಟ್‌ಗಳು ವಿವಾಹಿತ ಜೀವನದ ಗೌರವಕ್ಕೆ ಹಾನಿ ಮಾಡುತ್ತವೆ” ಎಂಬುದಾಗಿ ತೀರ್ಪು ನೀಡಿದೆ.

ಲೈಂಗಿಕ ವಿಷಯದ ಚರ್ಚೆ ಸಭ್ಯತೆಯನ್ನು ಮೀರಬಾರದು

ನ್ಯಾಯಪೀಠ ಈ ಸಂಬಂಧ ಹೇಳಿದ್ದು, “ಮದುವೆಯಾದ ವ್ಯಕ್ತಿಯೊಬ್ಬರು ತಮ್ಮ ಗಂಡ ಅಥವಾ ಹೆಂಡತಿಯ ಮೇಲಿನ ಗೌರವವನ್ನು ಕಾಪಾಡಿಕೊಳ್ಳಬೇಕು. ಮೊಬೈಲ್‌ ಅಥವಾ ಇನ್ನಿತರ ಡಿಜಿಟಲ್‌ ಮಾಧ್ಯಮಗಳಲ್ಲಿ ಸ್ನೇಹಿತರ ಜತೆ ಸಂಭಾಷಣೆ ನಡೆಸುವುದಕ್ಕೆ ಸ್ವತಂತ್ರರು. ಆದರೆ ಗಂಡ-ಹೆಂಡತಿಯರ ನಡುವಿನ ವೈಯಕ್ತಿಕ ಸಂಬಂಧವನ್ನು ಹಾನಿ ಮಾಡುವಂತಹ ಅಶ್ಲೀಲ ಚಾಟಿಂಗ್‌ಗಳು ಮತ್ತು ಸಂದೇಶಗಳು ವಿವಾಹಿತ ಜೀವನದ ಶಿಸ್ತಿಗೆ ಧಕ್ಕೆಯುಂಟುಮಾಡುತ್ತವೆ” ಎಂದು ಅಭಿಪ್ರಾಯಪಟ್ಟಿದೆ.

ಹಾಗೆಯೇ, “ಪತ್ನಿ ಪರಪುರುಷನೊಂದಿಗೆ ಅಶ್ಲೀಲ ಮೆಸೇಜ್‌ ಮಾಡುವುದು ಪತಿಯ ಮಾನಸಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುತ್ತದೆ, ಇದು ಮಾನಸಿಕ ಕ್ರೌರ್ಯಕ್ಕೆ ಸಮಾನ” ಎಂದು ನ್ಯಾಯಾಲಯ ವಿವರಿಸಿದೆ.

ಪ್ರಕರಣದ ಹಿನ್ನೆಲೆ

ಈ ವಿವಾದಕ್ಕೆ ಕಾರಣವಾದ ದಂಪತಿ 2018ರಲ್ಲಿ ವಿವಾಹವಾಗಿದ್ದರು. ವಿವಾಹದ ಕೆಲ ತಿಂಗಳ ಬಳಿಕ ಪತ್ನಿ ತನ್ನ ಮಾಜಿ ಪ್ರೇಮಿಯೊಂದಿಗೆ ನಿರಂತರವಾಗಿ ಅಶ್ಲೀಲ ಚಾಟ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಪತಿ, ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದರು. ವಿಚಾರಣೆಯ ವೇಳೆ, ಪತಿ ನೀಡಿದ ಸಾಕ್ಷ್ಯಾಧಾರಗಳು ಮತ್ತು ಮಹಿಳೆಯ ತಂದೆಯ ಹೇಳಿಕೆ ಪರಿಶೀಲಿಸಿದ ನ್ಯಾಯಾಲಯ, ವಿಚ್ಛೇದನ ನೀಡಲು ತೀರ್ಮಾನಿಸಿತು.

ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದರೂ, ನ್ಯಾಯಾಲಯ ವಿವಾಹಿತರು ನಡೆಸುವ ಸಂಭಾಷಣೆಗಳು ಘನತೆ ಮತ್ತು ಗೌರವದಿಂದ ಕೂಡಿರಬೇಕು ಎಂದು ಹೇಳಿದೆ. ಹೀಗಾಗಿ, ವಿವಾಹಿತರು ತಮ್ಮ ವೈಯಕ್ತಿಕ ಜೀವನವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಲೈಂಗಿಕ ವಿಷಯದ ಚರ್ಚೆಯಲ್ಲಿ ಸಭ್ಯತೆ ಮೀರಬಾರದು ಎಂಬ ಸಂದೇಶ ನೀಡಿದೆ.

Exit mobile version