ಸಿಂಗ್ರೌಲಿ (ಮಧ್ಯಪ್ರದೇಶ): ತುರ್ತು ಸಂದರ್ಭಗಳಲ್ಲಿ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಬಳಸಬೇಕಾದ ಅಗ್ನಿಶಾಮಕ ವಾಹನವನ್ನು ಬಿಜೆಪಿ ಶಾಸಕರ ಖಾಸಗಿ ಕಾರು ತೊಳೆಯಲು ಬಳಸಲಾಗಿದೆ ಎಂಬ ಆರೋಪ ಮಧ್ಯಪ್ರದೇಶದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸರ್ಕಾರಿ ಯಂತ್ರಾಂಗವನ್ನು ವೈಯಕ್ತಿಕ ಕೆಲಸಕ್ಕೆ ಬಳಸಲಾಗಿದೆ ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಮಧ್ಯಪ್ರದೇಶದ ಸಿಂಗ್ರೌಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್‌ನಿವಾಸ್ ಶಾ ಅವರ ಅಧಿಕೃತ ನಿವಾಸದ ಮುಂಭಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಾನಗರ ಪಾಲಿಕೆಯ ಮೂವರು ಸಿಬ್ಬಂದಿ ಅಗ್ನಿಶಾಮಕ ವಾಹನದ ಪೈಪ್ ಮೂಲಕ ನೀರು ಹರಿಸಿ ಶಾಸಕರ ಖಾಸಗಿ ಇನ್ನೋವಾ ಕಾರನ್ನು ತೊಳೆಯುತ್ತಿರುವ ದೃಶ್ಯ ಕಂಡುಬರುತ್ತದೆ.
ಸರ್ಕಾರಿ ವಾಹನದಿಂದ ಖಾಸಗಿ ಕಾರು ವಾಶ್?
ಸಾಮಾನ್ಯವಾಗಿ ಅಗ್ನಿಶಾಮಕ ವಾಹನಗಳನ್ನು ಬೆಂಕಿ ಅವಘಡಗಳು ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಇಂತಹ ವಾಹನಗಳನ್ನು ಅಗತ್ಯವಿಲ್ಲದ ವೈಯಕ್ತಿಕ ಕೆಲಸಗಳಿಗೆ ಬಳಸಿರುವುದು ಸರಿಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಬಂದಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಸಾಮಾನ್ಯರ ಮನೆ ಅಥವಾ ಆಸ್ತಿಗೆ ಬೆಂಕಿ ಬಿದ್ದಾಗ ತುರ್ತು ಸೇವೆ ಒದಗಿಸಬೇಕಾದ ವಾಹನವನ್ನು ಖಾಸಗಿ ಕಾರು ತೊಳೆಯಲು ಬಳಸುವುದು ಸರ್ಕಾರಿ ಸಂಪನ್ಮೂಲಗಳ ದುರ್ಬಳಕೆ ಎಂದು ಆರೋಪಿಸಲಾಗಿದೆ.
ಕಾಂಗ್ರೆಸ್‌ನಿಂದ ತೀವ್ರ ವಾಗ್ದಾಳಿ
ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ವಿಧಾನಸಭೆಯ ವಿಪಕ್ಷ ನಾಯಕ ಉಮಂಗ್ ಸಿಂಗಾರ್ ಅವರು ಆಡಳಿತಾರೂಢ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಸಾಮಾನ್ಯ ಜನರ ಮನೆಗಳಿಗೆ ಬೆಂಕಿ ಬಿದ್ದಾಗ ಅಗ್ನಿಶಾಮಕ ವಾಹನ ಸಮಯಕ್ಕೆ ತಲುಪುವುದಿಲ್ಲ ಎಂಬ ಆರೋಪಗಳ ನಡುವೆ, ಬಿಜೆಪಿ ಶಾಸಕರ ಖಾಸಗಿ ಕಾರು ತೊಳೆಯಲು ಸರ್ಕಾರಿ ಅಗ್ನಿಶಾಮಕ ವಾಹನ ಬಳಕೆಯಾಗಿರುವುದು ದುರಂತ ಎಂದು ಅವರು ಟೀಕಿಸಿದ್ದಾರೆ.
ಸರ್ಕಾರಿ ಸೌಲಭ್ಯಗಳನ್ನು ಜನರ ಸೇವೆಗಾಗಿ ಬಳಸಬೇಕೇ ಹೊರತು ಜನಪ್ರತಿನಿಧಿಗಳ ವೈಯಕ್ತಿಕ ಅನುಕೂಲಕ್ಕಾಗಿ ಬಳಸಬಾರದು ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ. ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕು ಹಾಗೂ ಸರ್ಕಾರಿ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿದ್ದರೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಶಾಸಕ ರಾಮ್‌ನಿವಾಸ್ ಶಾ ಹೇಳಿದ್ದೇನು?
ಇನ್ನು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಬಿಜೆಪಿ ಶಾಸಕ ರಾಮ್‌ನಿವಾಸ್ ಶಾ ಪ್ರತಿಕ್ರಿಯಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ತಾವು ಸ್ಥಳದಲ್ಲೇ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಾವು ಭೋಪಾಲ್‌ನಿಂದ ಹಿಂದಿರುಗಿದ ಬಳಿಕ ಶಾಲೆಯೊಂದರಲ್ಲಿ ಸೈಕಲ್ ವಿತರಣೆ ಕಾರ್ಯಕ್ರಮ ಹಾಗೂ ಇತರ ಸಭೆಗಳಲ್ಲಿ ಭಾಗವಹಿಸಲು ತೆರಳಿದ್ದೆ. ಈ ನಡುವೆ ತಮ್ಮ ಕಾರನ್ನು ಬೇಗ ತೆಗೆದುಕೊಂಡು ಬರುವಂತೆ ಚಾಲಕನಿಗೆ ಸೂಚಿಸಿದ್ದೆ ಎಂದು ಶಾಸಕ ತಿಳಿಸಿದ್ದಾರೆ.
ಕಾರನ್ನು ತೆಗೆದುಕೊಂಡು ಬರುವ ಸಂದರ್ಭದಲ್ಲಿ ನಿವಾಸದ ಬಳಿ ಏನು ನಡೆದಿದೆ ಎಂಬುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅವರು ಹೇಳಿದ್ದಾರೆ. ಜೊತೆಗೆ, ಶಾಸಕರಾದವರು ತಾವೇ ನಿಂತು ಕಾರು ತೊಳೆಯುತ್ತಾರೆಯೇ ಎಂದು ಪ್ರಶ್ನಿಸುವ ಮೂಲಕ ತಮ್ಮ ವಿರುದ್ಧದ ಟೀಕೆಗೆ ತಿರುಗೇಟು ನೀಡಿದ್ದಾರೆ.
