ಮಗಳ ಮದುವೆಗೂ ಮುನ್ನ ಭಾವಿ ಅಳಿಯನೊಂದಿಗೆ ಅತ್ತೆ ಪರಾರಿ!

Untitled design 2025 04 09t194240.119

ಉತ್ತರ ಪ್ರದೇಶದ ಅಲಿಗಢದಲ್ಲಿ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮಗಳ ಮದುವೆಗೆ ಕೇವಲ ಒಂಬತ್ತು ದಿನಗಳು ಮಾತ್ರ ಬಾಕಿ ಇದ್ದಾಗ, ವಧುವಿನ ತಾಯಿಯೇ ಭಾವಿ ಅಳಿಯನೊಂದಿಗೆ ಪರಾರಿಯಾಗಿದ್ದಾರೆ. ಅತ್ತೆ ತನ್ನ ಮಗಳ ಮದುವೆಗಾಗಿ ಸಿದ್ಧಗೊಳಿಸಿದ್ದ ಚಿನ್ನದ ಒಡವೆಗಳನ್ನೂ ಸಹ ಕದ್ದುಕೊಂಡು ಹೋಗಿದ್ದಾಳೆ.

ಮದ್ರಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಒಬ್ಬ ಮಹಿಳೆ ತನ್ನ ಮಗಳ ಭಾವಿ ಗಂಡನೊಂದಿಗೆ ಓಡಿಹೋಗಿದ್ದು ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ಏಪ್ರಿಲ್ 16ರಂದು ಇವರಿಬ್ಬರಿಗೂ ವಿವಾಹ ನಿಶ್ಚಯವಾಗಿತ್ತು. ಆದರೆ ಮದುವೆಯ ಸಿದ್ಧತೆಗಾಗಿ ಯುವಕ ಆಗಾಗ ವಧುವಿನ ಮನೆಗೆ ಭೇಟಿ ನೀಡುತ್ತಿದ್ದ. ಆದರೆ, ಕ್ರಮೇಣ ಅವನಿಗೆ ವಧುವಿನ ತಾಯಿಯೊಂದಿಗೆ ಅನೈತಿಕ ಸಂಬಂಧ ಬೆಳೆದಿದ್ದು ತಿಳಿದುಬಂದಿದೆ. ಹೀಗಾಗಿ ತನ್ನ ಮಗಳ ಮದುವೆಯಾಗಬೇಕಿದ್ದ ವರನೊಂದಿಗೆ ತಾಯಿ ಓಡಿ ಹೋಗಿದ್ದಾಳೆ. 

ಪೊಲೀಸ್ ತನಿಖೆಯ ಪ್ರಕಾರ, ಮದುವೆಯ ಸಮಯದಲ್ಲಿ ಖರೀದಿಸಿದ್ದ ಚಿನ್ನದ ಒಡವೆಗಳನ್ನು ತೆಗೆದುಕೊಂಡು ಅತ್ತೆ ಮತ್ತು ಭಾವಿ ಅಳಿಯನು ಪರಾರಿಯಾಗಿದ್ದಾರೆ. ಯುವಕನು ವಧುವಿನ ತಾಯಿಗೆ ಮೊಬೈಲ್ ಫೋನ್ ನೀಡಿದ್ದು, ಅದರ ಮೂಲಕ ಇಬ್ಬರ ನಡುವೆ ಮಾತನಾಡುವುದು, ಚಾಟಿಂಗ್‌‌ ನಡೆಯುತ್ತಿದ್ದವು. ಇದು ಮುಂದೆ ಪ್ರೀತಿಗೆ ತಿರುಗಿದ್ದು, ಇದಕ್ಕೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. 

ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಫೋನ್ ಟ್ರ್ಯಾಕಿಂಗ್ ಮೂಲಕ ಇಬ್ಬರನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ. “ಮಗಳ ಮದುವೆ ಮಾಡಿಕೊಳ್ಳಬೇಕಿದ್ದವನು ನನ್ನ ಹೆಂಡತಿಯನ್ನು ಮೋಸಗೊಳಿಸಿ ಓಡಿಸಿಕೊಂಡು ಹೋಗಿದ್ದಾನೆ. ಅವರು ಓಡಿಹೋಗುವ ಮೊದಲು ಎಲ್ಲಾ ಯೋಜನೆ ಮಾಡಿದ್ದರು” ಎಂದು ದೂರುದಾರ ಹೇಳಿದ್ದಾನೆ. ಪೊಲೀಸ್ ಅಧಿಕಾರಿಗಳು ಈಗ ಘಟನೆಯ ಸುಳಿವುಗಳನ್ನು ಸಂಗ್ರಹಿಸುತ್ತಿದ್ದಾರೆ.

ಈ ಘಟನೆ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಾನಾ ಪ್ರತಿಕ್ರಿಯೆಗಳು ಬರುತ್ತಿವೆ.  

Exit mobile version