ಟೆಲ್ ಅವೀವ್, ಮಾರ್ಚ್ 2: ಇರಾನ್ ವಿರುದ್ಧದ ಸಂಘರ್ಷದಲ್ಲಿ ಇಸ್ರೇಲ್‌ನೊಂದಿಗೆ ನಿಂತಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ. ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಈ ಬೆಳವಣಿಗೆಗಳ ನಡುವೆ ಪ್ರಧಾನಿ ಮೋದಿ ಮತ್ತು ನೆತನ್ಯಾಹು ನಡುವೆ ಮಹತ್ವದ ದೂರವಾಣಿ ಸಂಭಾಷಣೆ ನಡೆದಿದೆ.
ಇಸ್ರೇಲ್-ಅಮೆರಿಕದ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಗಂಭೀರ ಮಟ್ಟಕ್ಕೆ ಏರಿದೆ. ಈ ಬೆಳವಣಿಗೆಯ ಪರಿಣಾಮವಾಗಿ ಇರಾನ್ ಪ್ರತೀಕಾರಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಇಸ್ರೇಲ್, ಅಮೆರಿಕ ಹಾಗೂ ಗಲ್ಫ್ ದೇಶಗಳ ಮೇಲೆ ದಾಳಿ ನಡೆಸುತ್ತಿದೆ ಎಂಬ ವರದಿಗಳು ಹೊರಬಿದ್ದಿವೆ. ಇದರ ಮಧ್ಯೆ ಭಾರತ ಶಾಂತಿಯುತ ಮಾತುಕತೆ ಮತ್ತು ರಾಜತಾಂತ್ರಿಕ ಪರಿಹಾರಕ್ಕೆ ಕರೆ ನೀಡಿದೆ.
ಟೆಲ್ ಅವೀವ್‌ನಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ನೆತನ್ಯಾಹು, “ನಮ್ಮ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು ದೂರವಾಣಿ ಮೂಲಕ ದೀರ್ಘವಾಗಿ ಮಾತನಾಡಿದ್ದೇನೆ. ಇಸ್ರೇಲ್ ಜೊತೆ ನಿಂತಿದ್ದಕ್ಕಾಗಿ, ಯಹೂದಿಗಳೊಂದಿಗೆ ನಿಂತಿದ್ದಕ್ಕಾಗಿ ಹಾಗೂ ಸತ್ಯದ ಪರ ನಿಂತಿದ್ದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸಿದ್ದೇನೆ. ಭಾರತ ಜನರ ಸ್ನೇಹವನ್ನು ನಾವು ಅತ್ಯಂತ ಮೌಲ್ಯವಾಗಿಟ್ಟುಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ. ಆದರೆ, ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು.
ಇನ್ನೊಂದೆಡೆ, ಪ್ರಧಾನಿ ಮೋದಿ ಅವರು ಮಾತುಕತೆಯ ವೇಳೆ ಮಧ್ಯಪ್ರಾಚ್ಯದ ಪರಿಸ್ಥಿತಿಯ ಬಗ್ಗೆ ಭಾರತದ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಸಂಘರ್ಷ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ನಾಗರಿಕರ ಸುರಕ್ಷತೆ ಅತ್ಯಂತ ಮುಖ್ಯವೆಂದು ಅವರು ಹೇಳಿದ್ದಾರೆ. ಎಲ್ಲ ರೀತಿಯ ಹಿಂಸಾಚಾರವನ್ನು ನಿಲ್ಲಿಸಿ, ಮಾತುಕತೆ ಹಾಗೂ ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿಯನ್ನು ಸ್ಥಾಪಿಸಬೇಕೆಂದು ಅವರು ಕರೆ ನೀಡಿದ್ದಾರೆ.
ಈ ಸಂಘರ್ಷದ ಪರಿಣಾಮವಾಗಿ ಒಬ್ಬ ಭಾರತೀಯ ಪ್ರಜೆ ಸಾವನ್ನಪ್ಪಿರುವುದು ದುಃಖದ ಸಂಗತಿಯಾಗಿದೆ. ಒಮನ್ ಕರಾವಳಿಯ ಸಮೀಪ ತೈಲ ಟ್ಯಾಂಕರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ನಾಗರಿಕನ ಹಡಗಿಗೆ ಸ್ಫೋಟಕಗಳಿಂದ ತುಂಬಿದ ಮಾನವರಹಿತ ದೋಣಿ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಈ ಘಟನೆ ಭಾರತ ಸರ್ಕಾರವನ್ನು ಗಂಭೀರ ಚಿಂತೆಗೆ ದೂಡಿದೆ. ಭಾರತೀಯ ನಾಗರಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.