ನವದೆಹಲಿ: ಐದು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೊನೆಯ ಹಂತದ ವಿದೇಶಿ ಭೇಟಿಯಾಗಿ ಇಟಲಿಗೆ ತೆರಳಿದ್ದಾರೆ. ಈ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಭಾರತದ ಜನಪ್ರಿಯ ‘ಮೆಲೋಡಿ’ ಚಾಕೋಲೇಟ್ ಅನ್ನು ಉಡುಗೊರೆಯಾಗಿ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಸ್ವತಃ ಜಾರ್ಜಿಯಾ ಮೆಲೋನಿ ಹಂಚಿಕೊಂಡಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಪ್ರಧಾನಿ ಮೋದಿ ಮತ್ತು ಮೆಲೋನಿ ನಡುವಿನ ಸ್ನೇಹಪೂರ್ಣ ಕ್ಷಣಗಳನ್ನು ಅನೇಕರು ಮೆಚ್ಚಿಕೊಂಡಿದ್ದರೂ, ವಿರೋಧ ಪಕ್ಷಗಳು ಇದನ್ನು ತೀವ್ರವಾಗಿ ಟೀಕಿಸಿವೆ. ದೇಶದಲ್ಲಿ ಆರ್ಥಿಕ ಸಂಕಷ್ಟ, ಇಂಧನ ದರ ಏರಿಕೆ, ರಸಗೊಬ್ಬರ ಕೊರತೆ ಹಾಗೂ ರೈತರ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಧಾನಿ ವಿದೇಶ ಪ್ರವಾಸದಲ್ಲಿ ತೊಡಗಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಎತ್ತಿವೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, “ದೇಶದ ಜನರು ಆರ್ಥಿಕ ಸಂಕಷ್ಟದಲ್ಲಿ ನರಳುತ್ತಿದ್ದಾರೆ. ರೈತರು, ಯುವಕರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಆದರೆ ಪ್ರಧಾನಿ ಮೋದಿ ಇಟಲಿಯಲ್ಲಿ ಚಾಕೋಲೇಟ್ ಹಂಚಿ ನಗುತ್ತಿದ್ದಾರೆ,” ಎಂದು ಟೀಕಿಸಿದ್ದಾರೆ.
ಅಲ್ಲದೆ, “ಆರ್ಥಿಕ ಬಿರುಗಾಳಿ ದೇಶದ ಮೇಲೆ ಬೀಸುತ್ತಿದೆ. ಜನರ ಸಮಸ್ಯೆಗಳ ಬಗ್ಗೆ ಚಿಂತಿಸಬೇಕಾದ ಸಂದರ್ಭದಲ್ಲಿ ಪ್ರಧಾನಿ ರೀಲ್ಸ್ ಮತ್ತು ವಿದೇಶಿ ಕಾರ್ಯಕ್ರಮಗಳಲ್ಲಿ ನಿರತರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಇದಕ್ಕೆ ಚಪ್ಪಾಳೆ ತಟ್ಟುತ್ತಿದ್ದಾರೆ. ಇದು ನಾಯಕತ್ವವಲ್ಲ, ಇದು ಒಂದು ಪ್ರಹಸನ,” ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಬಿಜೆಪಿ ನಾಯಕರು ಹಾಗೂ ಮೋದಿ ಬೆಂಬಲಿಗರು ಈ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ವಿದೇಶಿ ನಾಯಕರೊಂದಿಗೆ ಉತ್ತಮ ಸಂಬಂಧ ಬೆಳೆಸುವುದು ದೇಶದ ರಾಜತಾಂತ್ರಿಕ ಹಿತಾಸಕ್ತಿಗೆ ಅಗತ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ಮೋದಿ ಜಾಗತಿಕ ವೇದಿಕೆಯಲ್ಲಿ ಭಾರತದ ಸಂಸ್ಕೃತಿ ಹಾಗೂ ಬ್ರ್ಯಾಂಡ್‌ಗಳನ್ನು ಪರಿಚಯಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
‘ಮೆಲೋಡಿ’ ಚಾಕೋಲೇಟ್ ಉಡುಗೊರೆಯ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಆಗಿದೆ. ಕೆಲವರು ಇದನ್ನು ಕೊಂಡಾಡುತ್ತಿದ್ದರೆ, ಮತ್ತೊಬ್ಬರು ದೇಶದ ಪ್ರಮುಖ ಸಮಸ್ಯೆಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಟೀಕಿಸುತ್ತಿದ್ದಾರೆ.
