ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಹಾಗೂ ಚೀನಾ ಗಡಿ ವಿವಾದದ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪ್ರಧಾನಿ ಈಗ ಪೂರ್ಣ ಪ್ರಮಾಣದಲ್ಲಿ ರಾಜಿಯಾಗಿದ್ದಾರೆ (Compromised). ಅವರು ದೇಶದ ಜನರ ಕಠಿಣ ಪರಿಶ್ರಮ ಮತ್ತು ರಕ್ತ-ಬೆವರಿನ ಫಲವನ್ನು ಅನ್ಯ ದೇಶಕ್ಕೆ ಮಾರಾಟ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಮಂಗಳವಾರ ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರ ವ್ಯಕ್ತಿತ್ವವನ್ನು ಟೀಕಿಸಿ, ಕಳೆದ ಹತ್ತು ವರ್ಷಗಳಿಂದ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾಗಿದ್ದ ಮೋದಿಯವರ ಬಿಂಬದ ಗುಳ್ಳೆ (Image Bubble) ಈಗ ಒಡೆಯುವ ಹಂತಕ್ಕೆ ಬಂದಿದೆ. ಅವರು ತೀವ್ರ ಒತ್ತಡದಲ್ಲಿದ್ದಾರೆ ಮತ್ತು ಆ ಒತ್ತಡಕ್ಕೆ ಮಣಿದು ದೇಶದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದ್ದ ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದಕ್ಕೆ ದಿಢೀರನೆ ಸಹಿ ಹಾಕಿರುವುದನ್ನು ರಾಹುಲ್ ಪ್ರಶ್ನಿಸಿದ್ದಾರೆ. ಯಾವುದೇ ಮಹತ್ವದ ಬದಲಾವಣೆಗಳು ಆಗದಿದ್ದರೂ, ನಿನ್ನೆ ಸಂಜೆ ಅವಸರವಸರವಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇಕೆ ? ಮೋದಿಯವರನ್ನು ಯಾರು ನಿಯಂತ್ರಿಸುತ್ತಿದ್ದಾರೆ ಮತ್ತು ಅವರನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ದೇಶದ ಜನರು ಅರ್ಥಮಾಡಿಕೊಳ್ಳಬೇಕಿದೆ. ಇದು ಭಾರತದ ಆರ್ಥಿಕ ಸ್ವಾಯತ್ತತೆಯ ಮೇಲೆ ನಡೆದ ದಾಳಿ ಎಂದು ಹೇಳಿದ್ದಾರೆ.
ಭಾರತದ ಸಂಸದೀಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ದೂರಿದ್ದಾರೆ. ಇದರ ಜೊತೆಗೆ ವಿಶೇಷವಾಗಿ ಚೀನಾ ಗಡಿ ವಿವಾದ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ ಅವರ ಜೀವನಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅಂಶಗಳ ಬಗ್ಗೆ ಚರ್ಚಿಸಲು ಸರ್ಕಾರ ಹೆದರುತ್ತಿದೆ ಎಂದು ಅವರು ಆರೋಪಿಸಿದರು.
ಮೋದಿ ಗಾಬರಿಯಾಗಿದ್ದಾರೆ (Panic). ಸಂಸತ್ತಿನಲ್ಲಿ ಸತ್ಯವನ್ನು ಎದುರಿಸುವ ಶಕ್ತಿ ಅವರಿಗಿಲ್ಲ. ಅದಕ್ಕಾಗಿಯೇ ಚರ್ಚೆಯಿಂದ ಓಡಿ ಹೋಗುತ್ತಿದ್ದಾರೆ. ಚೀನಾ ವಿಷಯದಲ್ಲಿ ಮೌನವಾಗಿರುವುದು ಮತ್ತು ಅಮೆರಿಕದ ಸುಂಕದ ಅಸ್ತ್ರಕ್ಕೆ ಹೆದರಿ ಶರಣಾಗಿರುವುದು ಮೋದಿಯವರ ದುರ್ಬಲ ನಾಯಕತ್ವಕ್ಕೆ ಸಾಕ್ಷಿ ಎಂದು ವಿಪಕ್ಷ ನಾಯಕ ರಾಹುಲ್ ಗಾಂದಿ ಹೇಳಿದ್ದಾರೆ.
