ರಿಯಲ್ ಲೈಫ್ ನಾಗಿಣಿ..ನಾಪತ್ತೆಯಾದ ಯುವತಿಯ ಹಾಸಿಗೆಯಲ್ಲಿ ಹಾವಿನ ಪೊರೆ.!

Untitled design 2026 02 10T131052.783

ಲಕ್ನೋ: ರಿಯಲ್ ಲೈಫ್ ನಾಗಿಣಿಯಂತೆ! ಯುವತಿಯೊಬ್ಬಳು ನಾಪತ್ತೆಯಾದ ಬಳಿಕ ಆಕೆಯ ಹಾಸಿಗೆಯಲ್ಲಿ ಹಾವಿನ ಪೊರೆ ಪತ್ತೆಯಾಗಿರುವ ಅಪರೂಪದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ನಾಗಿಣಿ ರೂಪ ತಾಳಿದ ಯುವತಿ ಮಾಯವಾಗಿದ್ದಾಳೆ ಎಂಬ ವದಂತಿಗಳು ಹರಡುತ್ತಿದ್ದಂತೆ, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ. ಆದರೆ ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಭಯಾನಕ ಘಟನೆಯ ಹಿಂದೆ ಇದ್ದದ್ದು ಪೂರ್ತಿ ಫಿಲ್ಮೀ ಸ್ಟೈಲ್ ಪ್ಲಾನ್ ಎಂಬುದು ಬೆಳಕಿಗೆ ಬಂದಿದೆ.

ಈ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ಒಂದು ಗ್ರಾಮದಲ್ಲಿ ನಡೆದಿದೆ. 25 ವರ್ಷದ ಯುವತಿ ರೀನಾ ಮನೆಯಿಂದ ಹಠಾತ್ ನಾಪತ್ತೆಯಾಗಿದ್ದಾಳೆ. ಬೆಳಿಗ್ಗೆ ಆಕೆಯ ಕೊಠಡಿಗೆ ಹೋಗಿದ್ದ ಕುಟುಂಬಸ್ಥರಿಗೆ ಕಣ್ಣೆದುರು ಕಾಣಿಸಿದ ದೃಶ್ಯವೇ ಭಯ ಹುಟ್ಟಿಸುವಂತಿತ್ತು. ರೀನಾಳ ಹಾಸಿಗೆಯ ಮೇಲೆ ಸುಮಾರು ಐದು ಅಡಿ ಉದ್ದದ ಹಾವಿನ ಪೊರೆ ಇಡಲಾಗಿತ್ತು. ಇದನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಆದರೆ ಯುವತಿ ಹಾವು ಆಗಿ ಬದಲಾಗಿದೆ ಎಂಬ ಊಹಪೋಹಗಳು ಹರಿದಾಡುತ್ತಿದೆ..

ಈ ಸುದ್ದಿ ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಮನೆಗಳಿಗೆ, ಅಲ್ಲಿಂದ ಇಡೀ ಗ್ರಾಮಕ್ಕೆ ಹರಡಿದೆ. “ಯುವತಿ ನಾಗಿಣಿಯಾಗಿದ್ದಾಳೆ”, “ಇದು ಪವಾಡ”, “ಹಾವಿನ ಶಾಪ” ಎಂಬ ಹಲವು ಇಲ್ಲಸಲ್ಲದ ಕಥೆಗಳು ಹುಟ್ಟಿಕೊಂಡಿವೆ. ಕುತೂಹಲಗೊಂಡ ಜನರು ರೀನಾಳ ಮನೆ ಮುಂದೆ ಜಮಾಯಿಸಿದ್ದು, ವಾತಾವರಣವೇ ಗೊಂದಲಮಯವಾಗಿದೆ. ಕೆಲವರು ಹಾವಿನ ಪೊರೆಯನ್ನು ದೇವರ ಸೂಚನೆ ಎಂದರೆ, ಇನ್ನೂ ಕೆಲವರು ಭಯದಿಂದ ಮನೆಗೆ ಬೀಗ ಹಾಕಿಕೊಂಡಿದ್ದಾರೆ.

ಇದೇ ನಡುವೆ ಯುವತಿ ಕಾಣೆಯಾಗಿರುವ ವಿಚಾರವನ್ನು ಗ್ರಾಮಸ್ಥರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ರೀನಾಳ ಮೊಬೈಲ್ ಕರೆ ವಿವರಗಳು, ಸ್ನೇಹಿತರ ಮಾಹಿತಿ ಹಾಗೂ ಕುಟುಂಬ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಂತೆ, ರೀನಾಳಿಗೆ ಕುಟುಂಬದವರು ನಿಶ್ಚಯಿಸಿದ್ದ ಮದುವೆ ಇಷ್ಟವಿರಲಿಲ್ಲ. ಈಗಾಗಲೇ ಆಕೆ ಮತ್ತೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ ಕುಟುಂಬದವರು ಬೇರೊಬ್ಬನೊಂದಿಗೆ ಮದುವೆ ಮಾಡಲು ಒತ್ತಡ ಹಾಕುತ್ತಿದ್ದ ಕಾರಣ, ರೀನಾ ಮನೆ ಬಿಟ್ಟು ಓಡಿ ಹೋಗಲು ನಿರ್ಧರಿಸಿದ್ದಾಳೆ.

ತಾನು ಮನೆ ಬಿಟ್ಟು ಹೋದ ಬಳಿಕ ಯಾರೂ ಹಿಂಬಾಲಿಸದಂತೆ ಮಾಡಲು, ಮತ್ತು ಎಲ್ಲರ ಗಮನವನ್ನು ಬೇರೆಡೆ ಸೆಳೆಯಲು ರೀನಾ ಈ ಖತರ್ನಾಕ್ ಪ್ಲಾನ್ ರೂಪಿಸಿದ್ದಾಳೆ. ಹಾವಿನ ಪೊರೆಯನ್ನು ತಂದು ಅದನ್ನು ತನ್ನ ಹಾಸಿಗೆಯ ಮೇಲೆ ಇಟ್ಟು, ಯಾರಿಗೂ ಗೊತ್ತಾಗದಂತೆ ರಾತ್ರಿ ಸಮಯದಲ್ಲಿ ಮನೆ ಬಿಟ್ಟು ಹೊರಟಿದ್ದಾಳೆ. ನಂತರ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾವಿನ ಪೊರೆ ಕಂಡು ಉಂಟಾದ ಭಯ ಮತ್ತು ಗೊಂದಲದಿಂದ, ರೀನಾ ತಕ್ಷಣ ಓಡಿ ಹೋಗಿದ್ದ ವಿಚಾರ ಯಾರಿಗೂ ಅನುಮಾನ ಬಂದಿರಲಿಲ್ಲ. ಈ ಕಾರಣದಿಂದ ಆಕೆಗೆ ಸಾಕಷ್ಟು ಸಮಯ ಸಿಕ್ಕಿದ್ದು, ಪೊಲೀಸರ ತನಿಖೆ ತಡವಾಗಲು ಕಾರಣವಾಗಿದೆ.

ಪೊಲೀಸರು ರೀನಾ ಹಾಗೂ ಆಕೆಯ ಪ್ರಿಯಕರನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ಮಾತನಾಡುತ್ತಾ, “ಇದು ಪವಾಡವೂ ಅಲ್ಲ, ನಾಗಿಣಿಯ ಕಥೆಯೂ ಅಲ್ಲ. ಇದು ಯುವತಿಯೊಬ್ಬಳು ಮದುವೆಯಿಂದ ತಪ್ಪಿಸಿಕೊಳ್ಳಲು ರೂಪಿಸಿದ ನಾಟಕ” ಎಂದು ಸ್ಪಷ್ಟಪಡಿಸಿದ್ದಾರೆ.

Exit mobile version