ಮೇಕೆದಾಟು ಯೋಜನೆಗೆ ಸಿಎಂ ವಿಜಯ್ ಆಕ್ಷೇಪ: ಪ್ರಧಾನಿ ಮೋದಿಗೆ ಪತ್ರ

Untitled design (77)

ನವದೆಹಲಿ, (ಜುಲೈ 28): ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ಯೋಜನೆ ಮತ್ತೊಮ್ಮೆ ರಾಜಕೀಯ ಮತ್ತು ಕಾನೂನು ಚರ್ಚೆಯ ಕೇಂದ್ರಬಿಂದುವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ತಮಿಳುನಾಡಿನ ಸಂಸದ ಡಾ. ಅನ್ಬುಮಣಿ ರಾಮದಾಸ್ ಕೇಳಿದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ರಾಜ್ ಭೂಷಣ್ ಚೌಧರಿ ನೀಡಿದ ಲಿಖಿತ ಉತ್ತರ ನೀಡಿದ್ದು, ಈ ಬೆಳವಣಿಗೆಗೆ ಕಾರಣವಾಗಿದೆ. ತಮ್ಮ ಉತ್ತರದಲ್ಲಿ, ಕರ್ನಾಟಕವು ತನ್ನ ಗಡಿಭಾಗದೊಳಗಿನ ನೀರಿನ ಬಳಕೆಗಾಗಿ ತಮಿಳುನಾಡು, ಕೇರಳ ಹಾಗೂ ಪುದುಚೇರಿಯ ಪ್ರತ್ಯೇಕ ಅನುಮತಿ ಪಡೆಯಬೇಕೆಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ನ್ಯಾಯಾಧಿಕರಣದ ಆದೇಶಕ್ಕೆ ಧಕ್ಕೆಯಾಗದ ರೀತಿಯಲ್ಲಿ ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ನೀರಿನ ಬಳಕೆಗೆ ಅಧಿಕಾರ ಹೊಂದಿವೆ ಎಂದು ತಿಳಿಸಿದೆ.

ಆದರೆ, ಕೇಂದ್ರದ ಈ ನಿಲುವಿಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ಆಲಮಟ್ಟಿ ಪ್ರಕರಣದ ತೀರ್ಪು ಸೇರಿದಂತೆ ಹಲವು ನ್ಯಾಯಾಂಗ ಆದೇಶಗಳನ್ನು ಉಲ್ಲೇಖಿಸಿ, ಕೆಳಭಾಗದ ರಾಜ್ಯಗಳ ಸಮ್ಮತಿಯಿಲ್ಲದೆ ಮೇಲ್ಭಾಗದ ರಾಜ್ಯ ಯಾವುದೇ ಹೊಸ ನೀರಾವರಿ ಅಥವಾ ಜಲಾಶಯ ಯೋಜನೆ ಕೈಗೊಳ್ಳಬಾರದು ಎಂದು ವಾದಿಸಿದ್ದಾರೆ.

ವಿಜಯ್ ಅವರ ಪ್ರಕಾರ, ಮೇಕೆದಾಟು ಯೋಜನೆ ಕೇವಲ ಕುಡಿಯುವ ನೀರಿನ ಯೋಜನೆಯಲ್ಲ; ಇದು ಕಾವೇರಿ ನದಿ ನೀರಿನ ಹಂಚಿಕೆ, ಕೃಷಿ ಮತ್ತು ಲಕ್ಷಾಂತರ ರೈತರ ಜೀವನೋಪಾಯದೊಂದಿಗೆ ನೇರವಾಗಿ ಸಂಬಂಧಿಸಿದೆ. ಕರ್ನಾಟಕದ ಈ ಪ್ರಸ್ತಾವನೆ ಕಾವೇರಿ ನೀರು ವಿವಾದ ನ್ಯಾಯಾಧಿಕರಣದ ಅಂತಿಮ ಆದೇಶ ಹಾಗೂ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

2019ರಲ್ಲಿ ಕರ್ನಾಟಕ ಸಲ್ಲಿಸಿದ್ದ ವಿಸ್ತೃತ ಯೋಜನಾ ವರದಿಯನ್ನು (DPR) ಕೇಂದ್ರ ಜಲ ಆಯೋಗ ನಿಯಮಗಳ ಕಾರಣದಿಂದ ಹಿಂದಿರುಗಿಸಿದ್ದ ವಿಚಾರವನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ, ಪಂಬಾರ್ ಜಲವಿದ್ಯುತ್ ಯೋಜನೆಯ ಹಿಂದಿನ ಪ್ರಕರಣವನ್ನು ಉದಾಹರಣೆಯಾಗಿ ನೀಡಿ, ಏಕಪಕ್ಷೀಯ ನಿರ್ಧಾರಗಳಿಂದ ಕೆಳಭಾಗದ ರಾಜ್ಯಗಳ ನೀರಾವರಿ ವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಕರ್ನಾಟಕ ಸರ್ಕಾರದ ವಾದಕ್ಕೆ ಬಲ ನೀಡುವಂತೆ ಕೇಂದ್ರ ಸರ್ಕಾರ, 2018ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ನೆರೆ ರಾಜ್ಯಗಳ ಪೂರ್ವಾನುಮತಿ ಕಡ್ಡಾಯ ಎಂದು ಯಾವುದೇ ನಿರ್ದೇಶನವಿಲ್ಲ ಎಂದು ಪುನರುಚ್ಚರಿಸಿದೆ. ಈ ಬೆಳವಣಿಗೆಯಿಂದ ಮೇಕೆದಾಟು ಯೋಜನೆ ಮತ್ತೊಮ್ಮೆ ಕರ್ನಾಟಕ-ತಮಿಳುನಾಡು ನಡುವಿನ ರಾಜಕೀಯ ಮತ್ತು ಕಾನೂನು ಸಂಘರ್ಷಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರ ಮಹತ್ವ ಪಡೆದುಕೊಳ್ಳಲಿದೆ.

Exit mobile version