ಶಹಜಹಾನ್‌ಪುರ, (ಜುಲೈ 28): ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಕನ್ವರ್ ಯಾತ್ರೆಯನ್ನು ಸುಸೂತ್ರವಾಗಿ ನಡೆಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ಭಕ್ತರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ. ವಿಶೇಷವಾಗಿ ಶಹಜಹಾನ್‌ಪುರ ಜಿಲ್ಲೆಯ ಮೂಲಕ ಸಾಗುವ ಯಾತ್ರಾ ಮಾರ್ಗದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕನ್ವರ್ ಯಾತ್ರೆಯು ಜುಲೈ 30ರಿಂದ ಆಗಸ್ಟ್ 11ರ ವರೆಗೆ ನಡೆಯಲಿದೆ.
ಪ್ರತಿ ವರ್ಷ ಲಕ್ಷಾಂತರ ಶಿವಭಕ್ತರು ಗಂಗಾಜಲವನ್ನು ಸಂಗ್ರಹಿಸಿ ಶಿವಲಿಂಗಕ್ಕೆ ಜಲಾಭಿಷೇಕ ಸಲ್ಲಿಸಲು ಗೋಲಾ ಗೋಕರ್ಣನಾಥ ದೇವಾಲಯದತ್ತ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಹಜಹಾನ್‌ಪುರದ ಪಾಂಚಾಲ ಘಾಟ್‌ನಿಂದ ಆರಂಭವಾಗುವ ಸುಮಾರು 90 ಕಿಲೋಮೀಟರ್ ಉದ್ದದ ಯಾತ್ರಾ ಮಾರ್ಗವನ್ನು ಸಂಪೂರ್ಣವಾಗಿ ಭದ್ರತಾ ವಲಯದ ಅಡಿಯಲ್ಲಿ ತರಲಾಗಿದೆ.
ಅಧಿಕಾರಿಗಳ ಮಾಹಿತಿಯಂತೆ, ಯಾತ್ರಾರ್ಥಿಗಳ ರಕ್ಷಣೆಗೆ 1,100 ಕಾನ್ಸ್‌ಟೇಬಲ್‌ಗಳು, 210 ಸಬ್ ಇನ್ಸ್‌ಪೆಕ್ಟರ್‌ಗಳು, 17 ಇನ್ಸ್‌ಪೆಕ್ಟರ್‌ಗಳು, 7 ಸರ್ಕಲ್ ಆಫೀಸರ್‌ಗಳು ಹಾಗೂ 44 ಮೋಟಾರ್ ಸೈಕಲ್ ಗಸ್ತು ತಂಡಗಳನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಲ್ಲಿನ ಮಾರ್ಗದುದ್ದಕ್ಕೂ ನಿರಂತರ ಪೊಲೀಸ್ ಗಸ್ತು ಮತ್ತು ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಭದ್ರತೆಯನ್ನು ಮತ್ತಷ್ಟು ಬಲಪಡಿಸಲು 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಕೂಡಾ ಅಳವಡಿಸಲಾಗಿದ್ದು, ಅವುಗಳನ್ನು ಜಿಲ್ಲಾ ನಿಯಂತ್ರಣ ಕೊಠಡಿ ಹಾಗೂ ಬರೇಲಿ ವಿಭಾಗೀಯ ಕಂಟ್ರೋಲ್ ರೂಮ್‌ಗೆ ಸಂಪರ್ಕಿಸಲಾಗಿದೆ. ಜೊತೆಗೆ, ಸುಮಾರು 500 ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನ ಸಂಚಾರ ಮತ್ತು ಭಕ್ತರ ಓಡಾಟವನ್ನು ನಿಯಂತ್ರಿಸಲಾಗುತ್ತಿದೆ.
ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಪೊಲೀಸ್ ಠಾಣೆ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸ್ಥಳೀಯ ಜನರ ಸಹಕಾರದೊಂದಿಗೆ 120ಕ್ಕೂ ಹೆಚ್ಚು ಸುರಕ್ಷತಾ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ಯಾತ್ರಿಕರಿಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ತುರ್ತು ಪರಿಸ್ಥಿತಿಯಲ್ಲಿ ಪೊಲೀಸರೊಂದಿಗೆ ಸಮನ್ವಯ ಸಾಧಿಸಲಿವೆ.
ಆಡಳಿತವು ಆಹಾರ ವ್ಯವಸ್ಥೆಯ ಮೇಲೆ ಸಹ ವಿಶೇಷ ಗಮನ ಹರಿಸುತ್ತಿದೆ ಎಂದು ತಿಳಿದು ಬಂದಿದೆ. ಯಾತ್ರಾ ಮಾರ್ಗದಲ್ಲಿರುವ ಡಾಬಾ, ಹೋಟೆಲ್ ಹಾಗೂ ಆಹಾರ ಮಳಿಗೆಗಳಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಬಳಸದಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜೊತೆಗೆ, ಮಾರ್ಗದಲ್ಲಿರುವ ಎಲ್ಲಾ ಮಾಂಸದ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶ ನೀಡಲಾಗಿದೆ.
ಯಾತ್ರಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಮಾರ್ಗದುದ್ದಕ್ಕೂ ಸ್ವಚ್ಛತೆ, ಶುದ್ಧ ಕುಡಿಯುವ ನೀರು, ಶೌಚಾಲಯ, ಸ್ನಾನಗೃಹ ಹಾಗೂ ಬಟ್ಟೆ ಬದಲಾಯಿಸುವ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ 7ರಿಂದ 8 ಕಿಲೋಮೀಟರ್ ಅಂತರದಲ್ಲಿ ರಾತ್ರಿ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಆಡಳಿತ ಕ್ರಮ ಕೈಗೊಂಡಿದೆ.
