ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ನ ಭಾರಿ ಹಣಕಾಸು ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮತ್ತು ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಕೇಂದ್ರ ತನಿಖಾ ಸಂಸ್ಥೆ (CBI) ಮತ್ತು ಜಾರಿ ನಿರ್ದೇಶನಾಲಯ (ED) ಸೇರಿದಂತೆ ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ಈ ಬಂಧನ ನಡೆದಿದೆ ಎಂದು ಮೂಲಗಳು ತಿಳಿಸಿದ್ದಾರೆ.
ಚೋಕ್ಸಿ ವಿರುದ್ಧ ಭಾರತದಲ್ಲಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದ್ದು, ಮುಂಬೈ ನ್ಯಾಯಾಲಯದ ಆದೇಶದ ಅನ್ವಯ ಅವರನ್ನು ಬಂಧಿಸಲಾಗಿದೆ. 2018ರಿಂದ ತಲೆಮರೆಸಿಕೊಂಡಿದ್ದ ಮೆಹುಲ್ ಚೋಕ್ಸಿಯನ್ನು ಏಪ್ರಿಲ್ 11ರಂದು ಬಂಧಿಸಲಾಗಿದೆ. ಬಂಧನ ಸಮಯದಲ್ಲಿ ಅವರು ಯುರೋಪ್ ದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ವಾಸವಿದ್ದುದು ವರದಿಯಾಗಿದೆ.
13,500 ಕೋಟಿ ರೂ. ವಂಚನೆ ಆರೋಪ
ಚೋಕ್ಸಿ ಮತ್ತು ಅವರ ಸೋದರಳಿಯ ನೀರವ್ ಮೋದಿ ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಗೆ ಸುಮಾರು ₹13,500 ಕೋಟಿ ರೂಪಾಯಿಗಳಷ್ಟು ವಂಚನೆ ನಡೆಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ವಂಚನೆಯು ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಬ್ಯಾಂಕ್ ಹಗರಣಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳ ಜೊತೆ ಸಂಚು ರೂಪಿಸಿ ನಕಲಿ ಖಾತೆಗಳ ಮೂಲಕ ವಿದೇಶಿ ಸಾಲಗಳನ್ನು ಪಡೆದು ಹಣವನ್ನು ವಂಚಿಸಿದ್ದಾಗಿ ತನಿಖೆಗಳಲ್ಲಿ ಬೆಳಕಿಗೆ ಬಂದಿದೆ.
ಆಂಟ್ವರ್ಪ್‌ನಲ್ಲಿ ವಾಸವಿದ್ದ ಚೋಕ್ಸಿ
ಮೆಹುಲ್ ಚೋಕ್ಸಿ ಬೆಲ್ಜಿಯಂನ ಆಂಟ್ವರ್ಪ್ ಎಂಬ ನಗರದಲ್ಲಿ ವಾಸವಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಲ್ಜಿಯಂನ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿದ ನಂತರ, ಚೋಕ್ಸಿಯು ಅವರ ದೇಶದಲ್ಲಿಯೇ ಇರುವುದನ್ನು ದೃಢಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಬೆಲ್ಜಿಯಂನ ಫೆಡರಲ್ ಪಬ್ಲಿಕ್ ಸರ್ವಿಸ್ ಫಾರ್ ಫಾರಿನ್ ಅಫೇರ್ಸ್‌ನ ವಕ್ತಾರ ಡೇವಿಡ್ ಜೋರ್ಡೆನ್ಸ್, “ಸರ್ಕಾರ ಈ ವಿಚಾರವನ್ನು ತುಂಬಾ ಸೂಕ್ಷ್ಮವಾಗಿ ಪರಿಗಣಿಸುತ್ತಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ಗಮನಾರ್ಹ ಪ್ರಕರಣವಾಗಿದ್ದು, ಎಲ್ಲಾ ಸರಿಯಾದ ಕಾನೂನು ಕ್ರಮಗಳನ್ನು ಅನುಸರಿಸಲಾಗುತ್ತಿದೆ,” ಎಂದು ಹೇಳಿದ್ದಾರೆ.
ಚೋಕ್ಸಿಯ ಬಂಧನದ ನಂತರ, ಭಾರತ ಸರ್ಕಾರ ಈಗ ಅವರ ಪ್ರತ್ಯರ್ಪಣೆಗಾಗಿ ಕ್ರಮ ಕೈಗೊಳ್ಳಲು ಸಜ್ಜಾಗಿದೆ. ಕೇಂದ್ರ ಗೃಹ ಸಚಿವಾಲಯ, ಪರರಾಷ್ಟ್ರ ವ್ಯವಹಾರಗಳ ಸಚಿವಾಲಯ ಹಾಗೂ ಇತರ ಸಂಬಂಧಿತ ಸಂಸ್ಥೆಗಳು ಚೋಕ್ಸಿಯ ತಕ್ಷಣದ ಪ್ರತ್ಯರ್ಪಣೆಗೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸುತ್ತಿವೆ.
ಭಾರತದ ನ್ಯಾಯಾಂಗ ವ್ಯವಸ್ಥೆಯ ಮುಂದೆ ಚೋಕ್ಸಿಯನ್ನು ನಿಲ್ಲಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಬಿಐ ಮೂಲಗಳು ಸ್ಪಷ್ಟಪಡಿಸಿವೆ. ಈ ಕುರಿತು ನ್ಯಾಯಾಂಗ ಸಹಕಾರ ಹಾಗೂ ಅಂತಾರಾಷ್ಟ್ರೀಯ ಪಡಿತರ ಒಪ್ಪಂದಗಳ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತಿದೆ.
