ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಮದುವೆ ಮಾರುಕಟ್ಟೆಯೂ ಒಂದು ದೊಡ್ಡ ಬ್ಯುಸಿನೆಸ್ ಆಗಿ ಬದಲಾಗುತ್ತಿದೆ. ಮದುವೆ ಹೆಸರಿನಲ್ಲಿ ವಂಚಿಸುವ ಜಾಲಗಳು ದಿನೇ ದಿನೇ ಹೆಚ್ಚುತ್ತಿದ್ದು, ಅದರಲ್ಲೂ ಶಿಕ್ಷಣವಂತರೇ ಇಂತಹ ಸೈಬರ್ ಕ್ರಿಮಿನಲ್ಗಳ ಬಲೆಗೆ ಬೀಳುತ್ತಿರುವುದು ಆತಂಕಕಾರಿ ಸಂಗತಿ. ಇತ್ತೀಚೆಗೆ ಮ್ಯಾಟ್ರಿಮೋನಿ ವೆಬ್ಸೈಟ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಉದ್ಯೋಗಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪರಿಚಯ ಶುರುವಾಗಿದ್ದು ಹೀಗೆ…
ಹೈದರಾಬಾದ್ನ ಹಳೆಯ ಅಲ್ವಾಲ್ ನಿವಾಸಿಯಾದ ಖಾಸಗಿ ಕಂಪನಿಯ ಅಕೌಂಟೆಂಟ್ ಒಬ್ಬರು ಮದುವೆಗಾಗಿ ಮ್ಯಾಟ್ರಿಮೋನಿ ವೆಬ್ಸೈಟ್ನಲ್ಲಿ ಪ್ರೊಫೈಲ್ ಹಾಕಿದ್ದರು. ಅಲ್ಲಿ ಅವರಿಗೆ ‘ನಂದಿತಾ ರೆಡ್ಡಿ’ ಎಂಬ ಯುವತಿಯ ಪರಿಚಯವಾಯಿತು. ಚಾಟಿಂಗ್ ಮೂಲಕ ಶುರುವಾದ ಈ ಪರಿಚಯ ನಂತರ ವಾಟ್ಸಾಪ್ನಲ್ಲಿ ಮುಂದುವರೆದಿದೆ. ಸುಮಾರು ಮೂರು ತಿಂಗಳ ಕಾಲ ಇಬ್ಬರೂ ನಿರಂತರವಾಗಿ ಮಾತುಕತೆ ನಡೆಸಿದ್ದರು.
ಯುವತಿ ತಾನು ಮೂಲತಃ ವಿಜಯವಾಡದವಳು, ಪ್ರಸ್ತುತ ಯುಕೆಯಲ್ಲಿ (UK) ಸ್ಟಾಕ್ ಟ್ರೇಡಿಂಗ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಳು. ಕೇವಲ ಯುವಕನನ್ನು ಮಾತ್ರವಲ್ಲದೆ, ವಿಡಿಯೋ ಕಾಲ್ ಮೂಲಕ ಆತನ ಮನೆಯವರನ್ನೂ ನಂಬಿಸಿ ವಿಶ್ವಾಸ ಗಳಿಸಿದ್ದಳು.
ಮಾತಿನಲ್ಲೇ ಮರುಳು ಮಾಡಿದ ಕಿರಾತಕಿ, ನಾನು ಅನುಭವಿ ಟ್ರೇಡರ್, ಮದುವೆ ನಂತರ ನಮ್ಮ ಭವಿಷ್ಯ ಉಜ್ವಲವಾಗಿರಬೇಕು ಅಂದರೆ ಈಗಲೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋಣ ಎಂದು ಆಮಿಷ ಒಡ್ಡಿದ್ದಳು. ಆಕೆಯ ಮಾತನ್ನು ನಂಬಿದ ಯುವಕ, ಆಕೆ ಸೂಚಿಸಿದ ಲಿಂಕ್ ಮೂಲಕ ಗೂಗಲ್ ಪ್ಲೇ ಸ್ಟೋರ್ನಲ್ಲಿದ್ದ ಒಂದು ನಕಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದ.
ಆರಂಭದಲ್ಲಿ 50,000 ರೂಪಾಯಿ ಹೂಡಿಕೆ ಮಾಡಿದಾಗ, ಆ್ಯಪ್ನಲ್ಲಿ ಭರ್ಜರಿ ಲಾಭ ಬಂದಂತೆ ತೋರಿಸಲಾಯಿತು. ಇದನ್ನು ನೋಡಿ ಖುಷಿಗೊಂಡ ಯುವಕ, ಹಂತಹಂತವಾಗಿ ಒಟ್ಟು 6.35 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾನೆ. ಆ್ಯಪ್ನಲ್ಲಿ ಸುಮಾರು 20 ಲಕ್ಷ ರೂಪಾಯಿ ಲಾಭ ಬಂದಿರುವುದು ಕಾಣಿಸುತ್ತಿತ್ತು.
ತನ್ನ ಖಾತೆಯಲ್ಲಿದ್ದ 20 ಲಕ್ಷ ರೂಪಾಯಿಯನ್ನು ವಿತ್ ಡ್ರಾ (Withdraw) ಮಾಡಲು ಹೋದಾಗ ಅಸಲಿ ಸತ್ಯ ಬಯಲಾಗಿದೆ. ಹಣ ಪಡೆಯಬೇಕಾದರೆ ಶೇ. 30ರಷ್ಟು ತೆರಿಗೆ ಪಾವತಿಸಬೇಕು ಎಂಬ ಮೆಸೇಜ್ ಬಂದಿದೆ. ಗಾಬರಿಗೊಂಡ ಯುವಕ ಈ ಬಗ್ಗೆ ಯುವತಿಯನ್ನು ವಿಚಾರಿಸಿದಾಗ ಆಕೆ ವರಸೆ ಬದಲಿಸಿದ್ದಾಳೆ. ಹಣದ ವಿಚಾರ ಬರುತ್ತಿದ್ದಂತೆ ಆಕೆಯ ಫೋನ್ ಸ್ವಿಚ್ ಆಫ್ ಆಗಿದೆ ಮತ್ತು ಮ್ಯಾಟ್ರಿಮೋನಿ ಪ್ರೊಫೈಲ್ ಕೂಡ ಮಾಯವಾಗಿದೆ. ಯುವಕ ಕೂಡಲೇ ಈ ಸಂಬಂಧ ಮಲ್ಕಾಜ್ಗಿರಿ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
