ಹೆಣ್ಣು ಮಕ್ಕಳನ್ನು ರಾತ್ರಿ ವೇಳೆ ಹೊರಗೆ ಬಿಡಬಾರದು: ಮಮತಾ ಬ್ಯಾನರ್ಜಿ ಶಾಕಿಂಗ್‌ ಹೇಳಿಕೆ

Untitled design (5)

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾಪುರದಲ್ಲಿ ನಡೆದ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರದ ಕುರಿತು ಮೌನ ಮುರಿದಿದ್ದಾರೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹುಡುಗಿಯರು ರಾತ್ರಿ ವೇಳೆ ಹೊರಗೆ ಹೋಗಬಾರದು ಎಂದು ಹೇಳಿದ್ದಾರೆ. “ರಾತ್ರಿ 12:30ಕ್ಕೆ ಹೊರಗೆ ಯಾಕೆ ಹೋಗಿದ್ದಳು?” ಎಂದು ಪ್ರಶ್ನಿಸಿದ ಮಮತಾ, ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಘಟನೆಯ ವಿವರಗಳು

ಶುಕ್ರವಾರ ಸಂಜೆ, ಕೋಲ್ಕತ್ತಾದಿಂದ ಸುಮಾರು ೧೭೦ ಕಿಲೋಮೀಟರ್ ದೂರದಲ್ಲಿರುವ ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ೨೩ ವರ್ಷದ ಒಡಿಶಾ ಮೂಲದ ವಿದ್ಯಾರ್ಥಿನಿಯನ್ನು ಆಸ್ಪತ್ರೆಯ ಹಿಂಭಾಗದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ರಾತ್ರಿ ೧೨:೩೦ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಆರೋಪಿಗಳು ವಿದ್ಯಾರ್ಥಿನಿಯನ್ನು ಬಲವಂತವಾಗಿ ಕರೆದೊಯ್ದು ಅಮಾನುಷ ಕೃತ್ಯ ಎಸಗಿದ್ದಾರೆ. ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳು ಕಾಲೇಜು ಸಿಬ್ಬಂದಿ ಅಥವಾ ಸ್ಥಳೀಯರಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಘಟನೆಯ ಕುರಿತು ಪ್ರತಿಕ್ರಿಯಿಸಿ, “ಹುಡುಗಿ ರಾತ್ರಿ 12:30ಕ್ಕೆ ಹೊರಗೆ ಏಕೆ ಹೋಗಿದ್ದಳು? ಹುಡುಗಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಅರಣ್ಯ ಪ್ರದೇಶವಿದೆ, ಸುರಕ್ಷತೆಗೆ ಗಮನ ಕೊಡಬೇಕು” ಎಂದು ಹೇಳಿದ್ದಾರೆ. ಅಲ್ಲದೆ, “ಯಾರನ್ನೂ ಕ್ಷಮಿಸುವುದಿಲ್ಲ, ತಪ್ಪಿತಸ್ಥರನ್ನು ಕಟ್ಟುನಿಟ್ಟಾಗಿ ಶಿಕ್ಷಿಸಲಾಗುವುದು. ನಮ್ಮ ಸರ್ಕಾರ ಇಂತಹ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳುತ್ತದೆ. ಕಳೆದ 1-2 ತಿಂಗಳಲ್ಲಿ ಅಂತಹ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿ, ಕೆಳ ನ್ಯಾಯಾಲಯದಿಂದ ಗಲ್ಲು ಶಿಕ್ಷೆ ಆದೇಶ ಪಡೆದಿದ್ದೇವೆ” ಎಂದು ತಿಳಿಸಿದ್ದಾರೆ. ಆದರೆ, ಅವರ ಹೇಳಿಕೆಯಲ್ಲಿ ಹುಡುಗಿಯರ ಮೇಲೆ ಜವಾಬ್ದಾರಿ ಹೇರಿರುವುದು ವಿವಾದಕ್ಕೆ ಕಾರಣವಾಗಿದೆ.

ಬಾಧಿತ ವಿದ್ಯಾರ್ಥಿನಿಯ ತಂದೆಯ ಪ್ರತಿಕ್ರಿಯಿಸಿದ್ದು, “ನನ್ನ ಮಗಳು ನೋವಿನಿಂದ ಬಳಲುತ್ತಿದ್ದಾಳೆ. ಅವಳು ನಡೆಯಲು ಸಾಧ್ಯವಿಲ್ಲ, ಹಾಸಿಗೆ ಹಿಡಿದಿದ್ದಾಳೆ. ಇಲ್ಲಿ ಅವಳ ಸುರಕ್ಷತೆಗೆ ಭರವಸೆಯಿಲ್ಲ. ಆರೋಪಿಗಳು ಅಥವಾ ಅವರ ಸ್ನೇಹಿತರು ಅವಳನ್ನು ಕೊಲ್ಲಬಹುದು. ಹೀಗಾಗಿ ನಾವು ಅವಳನ್ನು ಒಡಿಶಾಗೆ ಕರೆದುಕೊಂಡು ಹೋಗುತ್ತೇವೆ. ಬಂಗಾಳದಲ್ಲಿ ಅವಳು ಇರಬೇಕೆಂದು ನಾವು ಬಯಸುವುದಿಲ್ಲ. ಅವಳು ಒಡಿಶಾದಲ್ಲಿ ತನ್ನ ಶಿಕ್ಷಣ ಮುಂದುವರಿಸುತ್ತಾಳೆ” ಎಂದು ಅವರು ಹೇಳಿದ್ದಾರೆ.

Exit mobile version