ದಿಸ್ಪುರ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ರಾಜೀನಾಮೆ ನೀಡದಿದ್ದರೆ ಅವರನ್ನು ಕಡ್ಡಾಯವಾಗಿ ವಜಾಗೊಳಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಬಂಗಾಳದ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಿಡಿದೆದ್ದಿದ್ದು, ಮಮತಾ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ.
‘ದೇಶ ಅವರ ಇಚ್ಛೆಯಂತೆ ನಡೆಯಲ್ಲ’
ಶರ್ಮಾ ಮಾತನಾಡಿ, “ಪಶ್ಚಿಮ ಬಂಗಾಳದ ಜನರು ಮಮತಾ ಬ್ಯಾನರ್ಜಿಯವರ ಹಲವಾರು ಲೋಪದೋಷಗಳನ್ನು ಬಹಳ ಸಮಯದಿಂದ ಸಹಿಸಿಕೊಂಡು ಬಂದಿದ್ದಾರೆ. ಆದರೆ ಈಗ ಸಾಕಾಗಿದೆ. ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡದಿದ್ದರೆ, ಸೂಕ್ತ ಕ್ರಮದ ಮೂಲಕ ವಜಾಗೊಳಿಸಬೇಕು. ದೇಶ ಮತ್ತು ಸಂವಿಧಾನ ಯಾರೊಬ್ಬರ ವ್ಯಕ್ತಿಗತ ಇಚ್ಛೆಯಂತೆ ನಡೆಯುವುದಿಲ್ಲ. ರಾಜ್ಯಪಾಲರು ಒಂದು ನಿರ್ದಿಷ್ಟ ಅವಧಿಯವರೆಗೆ ಕಾಯಬಹುದು, ಆ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸೀಟು ಕಸಿದುಕೊಂಡ ಪ್ರಶ್ನೆಗೆ ತಿರುವು
ಚುನಾವಣಾ ಫಲಿತಾಂಶದ ಬಳಿಕ ಮಮತಾ ಅವರು ‘ನಮ್ಮಿಂದ 100 ಸ್ಥಾನಗಳನ್ನು ಕಸಿದುಕೊಳ್ಳಲಾಗಿದೆ’ ಎಂದು ಅಳು ಮುಖ ಮಾಡಿಕೊಂಡಿರುವುದನ್ನು ಶರ್ಮಾ ತೀವ್ರವಾಗಿ ಟೀಕಿಸಿದರು. “ನೀವು ಹೀಗೆ ಹೇಳಿದರೆ, ಕಾಂಗ್ರೆಸ್ ಗೆದ್ದ 19 ಸ್ಥಾನಗಳನ್ನು ನನ್ನಿಂದ ಕಸಿದುಕೊಳ್ಳಲಾಗಿದೆ ಎಂದು ನಾನೂ ಹೇಳಲೇಬೇಕು. ಬಿಜೆಪಿಗೆ ಸ್ಪಷ್ಟ ಬಹುಮತ ಬರಬೇಕಿತ್ತು, ನನಗೆ 126 ಸ್ಥಾನಗಳು ಸಿಗಬೇಕಿತ್ತು. ಆದರೆ ಇದು ಪ್ರಜಾಪ್ರಭುತ್ವ. ಒಂದು ದೇಶ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ತರಾಟೆ ತೆಗೆದುಕೊಂಡರು.
‘ಭಾರತ ಸಹನೀಯ ದೇಸ ಅಷ್ಟೆ’
ಹಿಮಂತ ಶರ್ಮಾ ಮತ್ತಷ್ಟು ಪ್ರತಿಕ್ರಿಯಿಸಿ, “ಭಾರತ ಅತ್ಯಂತ ಸಹನೀಯ ದೇಶ. ಅದಕ್ಕಾಗಿಯೇ ಜನರು ಮಮತಾ ಬ್ಯಾನರ್ಜಿಯನ್ನು ಇಷ್ಟು ದಿನ ಸಹಿಸಿಕೊಂಡು ಬಂದಿದ್ದಾರೆ. ಆದರೆ ನೀವು ಗಡಿಯಲ್ಲಿ ಬೇಲಿ ಹಾಕಲೂ ಅವಕಾಶ ನೀಡದಿದ್ದರೆ, ನಿಮ್ಮಿಂದ ಸೀಟುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಗೋಳಾಡುವುದು ಸರಿಯಲ್ಲ. ಈ ಫಲಿತಾಂಶವು ಬಹಳ ಹಿಂದೆಯೇ ಬರಬೇಕಿತ್ತು. ಪಶ್ಚಿಮ ಬಂಗಾಳದ ಜನರು ನಿಮಗೆ ಸುದೀರ್ಘ ಅವಕಾಶ ನೀಡಿದರು. ಇಂದು ಅವರು ಬದಲಾವಣೆ ಬಯಸುತ್ತಿದ್ದಾರೆ. ಅದು ಬಿಜೆಪಿಯತ್ತ ಒಲವು ತೋರಿದ್ದಾರೆ” ಎಂದು ಹೇಳಿದರು.
ಮಮತಾ ರಾಜೀನಾಮೆ ನಿರಾಕರಣೆ
ಸತತ ಮೂರು ಅವಧಿಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ತೃಣಮೂಲ ಕಾಂಗ್ರೆಸ್ (TMC) ಈ ಬಾರಿ ಹೀನಾಯ ಸೋಲು ಕಂಡಿದೆ. ಬಿಜೆಪಿ ಉತ್ತಮ ಪ್ರದರ್ಶನದ ಮೂಲಕ ಅಧಿಕಾರಕ್ಕೆ ಬಂದಿದೆ. ಈ ಹಿನ್ನೆಲೆ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಮಮತಾ ಬ್ಯಾನರ್ಜಿ ನಿರಾಕರಿಸಿದ್ದಾರೆ. ‘ನಾನು ಸೋತಿಲ್ಲ, ಹಾಗಾಗಿ ನಾನು ರಾಜಭವನಕ್ಕೆ ರಾಜೀನಾಮೆ ಸಲ್ಲಿಸಲು ಹೋಗುವುದಿಲ್ಲ. ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಶರ್ಮಾ ಅವರ ಪ್ರತಿಕ್ರಿಯೆ “ನೀವು ರಾಜೀನಾಮೆ ನೀಡಬೇಕೆ ಅಥವಾ ಬೇಡವೇ ಎಂಬುದರ ಮೇಲೆ ಸಮಾಜ ಕಾರ್ಯನಿರ್ವಹಿಸುತ್ತದೆ ಎಂಬಂತೆ ‘ನಾನು ರಾಜೀನಾಮೆ ನೀಡುವುದಿಲ್ಲ’ ಎಂದು ಹೇಳುವುದು ಅರ್ಥಹೀನ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
