ಚೆನ್ನೈ: ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚೆನ್ನೈನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಟೆರರಿಸ್ಟ್” (ಭಯೋತ್ಪಾದಕ) ಎಂದು ಕರೆದು ವಿವಾದ ಸೃಷ್ಟಿಸಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಜೆಪಿ-ಎಐಎಡಿಎಂಕೆ ಮೈತ್ರಿಯನ್ನು ಟೀಕಿಸುವ ವೇಳೆ ಖರ್ಗೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಏನು ಹೇಳಿದ್ದಾರೆ ಖರ್ಗೆ?
ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ಒಬ್ಬ ಟೆರರಿಸ್ಟ್. ಅವರು ತಮ್ಮ ವಿರೋಧಿಗಳನ್ನು ಬೆದರಿಸುತ್ತಾರೆ, ಭಯೋತ್ಪಾದಿಸುತ್ತಾರೆ. ಮೋದಿ ಅವರಿಗೆ ಸಮಾನತೆಯಲ್ಲಿ ನಂಬಿಕೆಯಿಲ್ಲ. ಅವರ ಪಕ್ಷಕ್ಕೂ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆಯಿಲ್ಲ. ಈ ಜನ ಅವರೊಂದಿಗೆ ಸೇರುತ್ತಿದ್ದಾರೆ ಅಂದ್ರೆ, ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರ್ಥ” ಎಂದು ಕಿಡಿಕಾರಿದರು. ತಮ್ಮ ಹೇಳಿಕೆ ಚರ್ಚೆಗೆ ಗ್ರಾಸವಾದ ತಕ್ಷಣ, ಖರ್ಗೆ ಅವರು ಸ್ಪಷ್ಟನೆ ನೀಡಲು ಹಿಂದೇಟು ಹಾಕಲಿಲ್ಲ.
ಸ್ಪಷ್ಟನೆ ಏನು?
“ಕೇಂದ್ರ ಸಂಸ್ಥೆಗಳು ಬಿಜೆಪಿಯೊಂದಿಗೆ ಕೈಜೋಡಿಸುತ್ತಿರುವುದರಿಂದ ಪ್ರಧಾನಿ ಮೋದಿ ವಿರೋಧಿಗಳನ್ನು ‘ಭಯೋತ್ಪಾದಿಸುತ್ತಾರೆ’. ವಿರೋಧಿಗಳಿಗೆ ಬೆದರಿಕೆ ಹಾಕುತ್ತಾರೆ. ಆದಾಯ ತೆರಿಗೆ, ಇಡಿ (ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್) ಮತ್ತು ಇತರ ತನಿಖಾ ಸಂಸ್ಥೆಗಳು ಅವರ ಕೈಯಲ್ಲಿವೆ. ಅದಕ್ಕಾಗಿ ಅವರು ಭಯ ಹುಟ್ಟಿಸುತ್ತಾರೆ. ಈ ಅರ್ಥದಲ್ಲಿ ನಾನು ಹೇಳಿದ್ದು. ಆದರೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ” ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
ರಾಜಕೀಯ ಪ್ರತಿಕ್ರಿಯೆ
ಬಿಜೆಪಿ ನಾಯಕರು ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, “ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವುದು ಅತ್ಯಂತ ಕ್ಷುದ್ರ ಮತ್ತು ಅಸಭ್ಯ ರಾಜಕಾರಣ. ಕಾಂಗ್ರೆಸ್ ಸೋಲಿನ ಹತಾಶೆಯಲ್ಲಿ ಈ ರೀತಿಯ ನಿಂದೆಗೆ ಇಳಿದಿದೆ. ಖರ್ಗೆ ಅವರು ಕ್ಷಮೆಯಾಚಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರುಗಳಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಟ್ವಿಟರ್ ಮೂಲಕ ತೀವ್ರ ಟೀಕೆ ಮಾಡಿದ್ದಾರೆ.
