ಚಂದ್ರಪುರ: ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯಲ್ಲಿ ಇಂದು (ಮೇ 22) ಬೆಳಿಗ್ಗೆ ಭೀಕರ ದುರಂತವೊಂದು ಸಂಭವಿಸಿದೆ. ಸಿಂಧೇವಾಹಿ ತಾಲೂಕಿನ ಗುಂಜೆವಾಹಿ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ನಾಲ್ವರು ಮಹಿಳೆಯರ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರತಿ ವರ್ಷ ಈ ಅವಧಿಯಲ್ಲಿ ತೇಂದು ಎಲೆಗಳ ಸಂಗ್ರಹಣೆಗೆ ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಪ್ರದೇಶಗಳಿಗೆ ತೆರಳುವುದು ಸಾಮಾನ್ಯ. ಇದೇ ರೀತಿ ಇಂದು ಬೆಳಿಗ್ಗೆಯೂ ಕೆಲವು ಮಹಿಳೆಯರು ಬೀಡಿ ತಯಾರಿಕೆಗೆ ಬಳಸುವ ತೇಂದು ಎಲೆಗಳನ್ನು ಕಲೆಹಾಕಲು ಗುಂಜೆವಾಹಿ ಅರಣ್ಯಕ್ಕೆ ತೆರಳಿದ್ದರು.
ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ದಟ್ಟವಾದ ಪೊದೆಯೊಳಗೆ ಅಡಗಿ ಕುಳಿತಿದ್ದ ಹುಲಿ, ಏಕಾಏಕಿ ಮಹಿಳೆಯರ ಮೇಲೆ ದಾಳಿ ನಡೆಸಿದೆ. ಹುಲಿಯ ದಾಳಿಗೆ ಮಹಿಳೆಯರು ತಪ್ಪಿಸಿಕೊಳ್ಳುವ ಅವಕಾಶವೇ ಸಿಗದೇ, ಕೆಲವೇ ಕ್ಷಣಗಳಲ್ಲಿ ನಾಲ್ವರು ಮಹಿಳೆಯರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಲಿಯ ದಾಳಿಯಲ್ಲಿ ಮೃತಪಟ್ಟ ಮಹಿಳೆಯರನ್ನು ಕೌದುಬಾಯಿ ದಾದಾಜಿ ಮೊಹುರ್ಲೆ (45), ಅನುಬಾಯಿ ದಾದಾಜಿ ಮೊಹುರ್ಲೆ (46), ಸಂಗೀತಾ ಸಂತೋಷ್ ಚೌಧರಿ (36) ಮತ್ತು ಸುನಿತಾ ಕೌಶಿಕ್ ಮೊಹುರ್ಲೆ (33) ಎಂದು ಗುರುತಿಸಲಾಗಿದೆ. ಮೃತರು ಒಂದೇ ಗ್ರಾಮದ ನಿವಾಸಿಗಳಾಗಿದ್ದು, ದಿನನಿತ್ಯದ ಕೂಲಿ ಕೆಲಸದ ಭಾಗವಾಗಿ ಅರಣ್ಯಕ್ಕೆ ತೆರಳಿದ್ದರು ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಗ್ರಾಮಸ್ಥರು ಭೀತಿಗೊಳಗಾದರು. ಬಳಿಕ ಅರಣ್ಯ ಇಲಾಖೆ ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸಿಂಧೇವಾಹಿ ಅರಣ್ಯ ವಲಯದ ಅಧಿಕಾರಿ ಅಂಜಲಿ ಸಾಯಂಕರ್ ನೇತೃತ್ವದಲ್ಲಿ ಸಿಬ್ಬಂದಿ ತಂಡ ಮೃತದೇಹಗಳನ್ನು ಪರಿಶೀಲಿಸಿ, ಪ್ರಾಥಮಿಕ ತನಿಖೆ ನಡೆಸಿದರು. ಮೃತದೇಹಗಳನ್ನು ಪೋಸ್ಟ್ ಮಾರ್ಟಮ್ಗಾಗಿ ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಈ ಘಟನೆ ಬಳಿಕ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿದ್ದು, ಹುಲಿಯ ಚಲನವಲನದ ಮೇಲೆ ನಿಗಾ ವಹಿಸಲಾಗಿದೆ. ಅಲ್ಲದೆ, ಗ್ರಾಮಸ್ಥರು ಗುಂಪಾಗಿ ಮಾತ್ರ ಅರಣ್ಯಕ್ಕೆ ತೆರಳಬೇಕು, ಒಂಟಿಯಾಗಿ ಹೋಗಬಾರದು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
