ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ನಡುವೆ ದೊಡ್ಡ ಮಟ್ಟದ ಆತಂಕಕಾರಿ ಘಟನೆ ನಡೆದಿದೆ. ಜಿಲ್ಲೆಯ ಪನ್ವೇಲ್ ತಾಲೂಕಿನ ಚವಾಣೆ ಗ್ರಾಮದ ಬಳಿ ಇರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (HPCL) ನ ಪಾತಾಳಗಂಗಾ LPG ಬಾಟ್ಲಿಂಗ್ ಸ್ಥಾವರಕ್ಕೆ ನದಿ ನೀರು ನುಗ್ಗಿ, ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು ಪ್ರವಾಹದ ನೀರಿನಲ್ಲಿ ತೇಲಿ ಹೋಗಿವೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ನಿರಂತರ ಮಳೆಯ ಪರಿಣಾಮ ಪಾತಾಳಗಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು, ಅದರ ಹೊಡೆತಕ್ಕೆ ಬಾಟ್ಲಿಂಗ್ ಸ್ಥಾವರದ ಆವರಣವೇ ನೀರಿನಿಂದ ಆವರಿಸಲ್ಪಟ್ಟಿದೆ. ಇದೇ ವೇಳೆ ಸ್ಥಾವರದಲ್ಲಿದ್ದ ಸಾವಿರಾರು LPG ಸಿಲಿಂಡರ್‌ಗಳು ನೀರಿನ ಪ್ರವಾಹಕ್ಕೆ ಸಿಲುಕಿ ನದಿಯಲ್ಲಿ ತೇಲಿಹೋಗಿವೆ. ಅಧಿಕಾರಿಗಳ ಮಾಹಿತಿ ಪ್ರಕಾರ, ತೇಲಿ ಹೋದ ಸಿಲಿಂಡರ್‌ಗಳಲ್ಲಿ ಕೆಲವು ಗ್ಯಾಸ್ ತುಂಬಿದ್ದವು, ಇನ್ನು ಕೆಲವು ಖಾಲಿಯಾಗಿದ್ದವು. ಯಾವ ಸಿಲಿಂಡರ್ ಯಾವ ಸ್ಥಿತಿಯಲ್ಲಿ ಇದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನದಿಯ ಹೊಳೆಯೊಡನೆ ದಟ್ಟವಾಗಿ ತೇಲುತ್ತಿರುವ ಅನೇಕ ಸಿಲಿಂಡರ್‌ಗಳು ಜನರ ಗಮನ ಸೆಳೆಯುತ್ತಿವೆ. LPG ಸಿಲಿಂಡರ್‌ಗಳ ಅಭಾವದ ಕುರಿತ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆ ಸಂಭವಿಸಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸುರಕ್ಷತಾ ದೃಷ್ಟಿಯಿಂದ ಇದು ಅತ್ಯಂತ ಗಂಭೀರ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಘಟನೆಯ ಬೆನ್ನಲ್ಲೇ ಜಿಲ್ಲಾಡಳಿತ ತುರ್ತು ಕ್ರಮಕ್ಕೆ ಮುಂದಾಗಿದೆ. ರಾಯಗಢ ಜಿಲ್ಲಾಧಿಕಾರಿ ಕಿಶನ್ ಜವಾಲೆ ಅವರು ಸ್ಥಳದ ಪರಿಸ್ಥಿತಿಯನ್ನು ಪರಿಶೀಲಿಸಿ, ನದಿಯಲ್ಲಿ ತೇಲುತ್ತಿರುವ ಅಥವಾ ದಡಕ್ಕೆ ತಲುಪುವ ಸಿಲಿಂಡರ್‌ಗಳ ಬಳಿಗೆ ಯಾರೂ ಹೋಗಬಾರದು ಎಂದು ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಯಾವ ಸಿಲಿಂಡರ್‌ನಲ್ಲಿ ಗ್ಯಾಸ್ ಇದೆ, ಯಾವುದು ಖಾಲಿಯಾಗಿದೆ, ಅವುಗಳಲ್ಲಿ ಹಾನಿ ಉಂಟಾಗಿದೆಯೇ ಎಂಬುದರ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಸಿಲಿಂಡರ್‌ಗಳನ್ನು ಮುಟ್ಟುವುದು, ಎತ್ತಿಕೊಳ್ಳುವುದು, ಸ್ಥಳಾಂತರಿಸುವುದು ಅಥವಾ ಮನೆಗೆ ಕೊಂಡೊಯ್ಯುವುದು ಜೀವಾಪಾಯಕ್ಕೆ ಕಾರಣವಾಗಬಹುದು ಎಂದು ಅವರು ತಿಳಿಸಿದ್ದಾರೆ.
“ಯಾವುದೇ ಸಿಲಿಂಡರ್ ಕಂಡುಬಂದರೆ ತಕ್ಷಣ ಸ್ಥಳೀಯ ಆಡಳಿತ, ಪೊಲೀಸ್ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕರು ಕುತೂಹಲದಿಂದಲೋ, ಲಾಭದಾಸೆಯಿಂದಲೋ ಸಿಲಿಂಡರ್‌ಗಳ ಬಳಿಗೆ ಹೋಗಬಾರದು,” ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಘಟನಾ ಸ್ಥಳದ ಸುತ್ತಮುತ್ತ ಪೊಲೀಸರು ನಿಯೋಜನೆಗೊಂಡಿದ್ದು, ನದಿ ತೀರ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.
ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಭಾರೀ ಮಳೆ ಮುಂದುವರಿಯುತ್ತಿರುವ ಹಿನ್ನೆಲೆ, ಪರಿಸ್ಥಿತಿ ಯಾವಾಗ ಬೇಕಾದರೂ ಮತ್ತಷ್ಟು ಹದಗೆಡಬಹುದೆಂಬ ಆತಂಕ ಅಧಿಕಾರಿಗಳಲ್ಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನೂ ಗಮನದಲ್ಲಿಟ್ಟುಕೊಂಡು ರಾಯಗಢ ಆಡಳಿತ ಸೂಕ್ಷ್ಮ ನಿಗಾ ವಹಿಸಿದೆ. ನದಿ ತೀರ ಪ್ರದೇಶದ ನಿವಾಸಿಗಳು ಅನಗತ್ಯವಾಗಿ ಹೊರಗೆ ಸಂಚರಿಸಬಾರದು, ಪ್ರವಾಹದ ನೀರಿಗೆ ಇಳಿಯಬಾರದು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮತ್ತೆ ಮತ್ತೆ ಮನವಿ ಮಾಡಲಾಗಿದೆ.
