ನಾಳೆ ಕರೂರಿಗೆ ಸಿಎಂ ವಿಜಯ್ ಭೇಟಿ: ಕಾಲ್ತುಳಿತ ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ಪತ್ರ ವಿತರಣೆ

Web Photo Editor 2026 07 09T124027.123

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನಾಳೆ ಕರೂರು ಜಿಲ್ಲೆಗೆ ಭೇಟಿ ನೀಡಲಿದ್ದು, ಜಿಲ್ಲಾಡಳಿತ ಹಾಗೂ ಪಕ್ಷದ ಕಾರ್ಯಕರ್ತರಿಂದ ಭರ್ಜರಿ ಸಿದ್ಧತೆಗಳು ನಡೆದಿವೆ. ಟಿವಿಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ವಿಜಯ್ ಕರೂರಿಗೆ ಭೇಟಿ ನೀಡುತ್ತಿರುವುದು ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಕರೂರಿನ ವೆನ್ನಮಲೈ ಸಮೀಪದ ಅಟ್ಲಾಸ್ ಕಲೈ ಅರಂಗಂನಲ್ಲಿ ಆಯೋಜಿಸಿರುವ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ವಿಜಯ್ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 2025ರ ಸೆಪ್ಟೆಂಬರ್ 27ರಂದು ಟಿವಿಕೆ ಚುನಾವಣಾ ಪ್ರಚಾರ ಸಮಾವೇಶದ ವೇಳೆ ಸಂಭವಿಸಿದ್ದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 41 ಮಂದಿಯ ಕುಟುಂಬಗಳ ಕಾನೂನುಬದ್ಧ ವಾರಸುದಾರರಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ.

ಕರೂರಿನಲ್ಲಿ ನಡೆದಿದ್ದ ಆ ದುರ್ಘಟನೆ ರಾಜ್ಯದಷ್ಟೇ ದೇಶಾದ್ಯಂತವೂ ಆಘಾತ ಮೂಡಿಸಿತ್ತು. ಈ ದುರಂತದ ಬಳಿಕ ಸಂತ್ರಸ್ತ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡದೇ ಇದ್ದ ವಿಜಯ್ ಅವರ ನಡೆಗೆ ವಿರೋಧ ಪಕ್ಷಗಳು ಹಾಗೂ ಸಾರ್ವಜನಿಕ ವಲಯದಿಂದ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಮುಖ್ಯಮಂತ್ರಿ ಹುದ್ದೆಗೇರಿದ ನಂತರ ಕರೂರಿಗೆ ಭೇಟಿ ನೀಡುತ್ತಿರುವ ವಿಜಯ್, ಸಂತ್ರಸ್ತ ಕುಟುಂಬಗಳಿಗೆ ನೇರವಾಗಿ ನೆರವು ನೀಡುತ್ತಿರುವುದು ಗಮನ ಸೆಳೆಯುತ್ತಿದೆ.

ಕಾರ್ಯಕ್ರಮಕ್ಕಾಗಿ ಸುಮಾರು 10 ಎಕರೆ ಪ್ರದೇಶದಲ್ಲಿ ವಿಶಾಲ ವೇದಿಕೆ ಮತ್ತು ಸಭಾಂಗಣ ವ್ಯವಸ್ಥೆ ಮಾಡಲಾಗಿದೆ. ಸುಮಾರು 5 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಭದ್ರತಾ ಕಾರಣಗಳಿಂದ ಕಾರ್ಯಕ್ರಮ ನಡೆಯುವ ಸ್ಥಳದ ಸುತ್ತ ತಡೆಗೋಡೆಗಳನ್ನು ಅಳವಡಿಸಲಾಗಿದೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಕ್ಯೂಆರ್ ಕೋಡ್ ಆಧಾರಿತ ಗುರುತಿನ ಚೀಟಿ ನೀಡಲಾಗಿದ್ದು, ಅದನ್ನು ಹೊಂದಿರುವವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಈ ಸಾರ್ವಜನಿಕ ಕಾರ್ಯಕ್ರಮದ ಹೊರತಾಗಿ, ಮುಖ್ಯಮಂತ್ರಿ ವಿಜಯ್ ಥಂತೋನಿ ಮಲೈನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಸರ್ಕಾರಿ ಕಲ್ಯಾಣ ಯೋಜನೆಗಳ ನೆರವು ವಿತರಿಸಲಿದ್ದಾರೆ. ಜೊತೆಗೆ ಕರೂರು ಜಿಲ್ಲೆಯ ಕೃಷ್ಣರಾಯಪುರಂ ಪಂಚಾಯತ್ ಒಕ್ಕೂಟದ ವನವಾಸಿ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಾಪನೆಯಾಗಲಿರುವ ಚರ್ಮರಹಿತ ಪಾದರಕ್ಷೆ ತಯಾರಿಕಾ ಖಾಸಗಿ ಕಾರ್ಖಾನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 1,700 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೈಗಾರಿಕಾ ಯೋಜನೆ ಜಾರಿಯಾಗಲಿದ್ದು, ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಇದರೊಂದಿಗೆ ವಿವಿಧ ಸರ್ಕಾರಿ ಇಲಾಖೆಗಳಡಿ 32 ಮಂದಿಗೆ ಅನುಕಂಪ ಆಧಾರಿತ ನೇಮಕಾತಿ ಆದೇಶಗಳನ್ನು ವಿತರಿಸುವ ಕಾರ್ಯಕ್ರಮವೂ ನಿಗದಿಯಾಗಿದೆ. ಮುಖ್ಯಮಂತ್ರಿ ವಿಜಯ್ ಆಗಮನದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪಕ್ಷದ ಧ್ವಜಗಳು, ಫ್ಲೆಕ್ಸ್ ಬ್ಯಾನರ್‌ಗಳು ಅಳವಡಿಸಲ್ಪಟ್ಟಿದ್ದು, ಎಲ್ಲಾ ಕಾರ್ಯಕ್ರಮ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

Exit mobile version