‘ನಿನಗಾಗಿ ಲೀಕ್ ಆದ ಪ್ರಶ್ನೆ ಪತ್ರಿಕೆಗಳಿವೆ ಡಾರ್ಲಿಂಗ್’: ವಿದ್ಯಾರ್ಥಿನಿಗೆ ಕಿರುಕುಳ, ಪ್ರೊಫೆಸರ್ ಆಡಿಯೋ ವೈರಲ್!

Untitled design 2026 05 16T150132.788

ಲಕ್ನೋ: ಲಕ್ನೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ತೃಪ್ತಿಗಾಗಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಲೀಕ್ ಮಾಡಿಕೊಡುವುದಾಗಿ ಆಮಿಷ ಒಡ್ಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಈ ಬೆನ್ನಲ್ಲೇ ಪ್ರಾಧ್ಯಾಪಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಆರೋಪಗಳನ್ನು ನಿರಾಕರಿಸಿರುವ ಅವರು, ಇದೊಂದು ಪಿತೂರಿ ಎಂದು ಹೇಳಿದ್ದಾರೆ.

ವೈರಲ್ ಆಡಿಯೋದಲ್ಲಿ ಏನಿದೆ?

ಲಕ್ನೋ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ (Zoology) ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪರಮ್‌ಜೀತ್ ಸಿಂಗ್ ಅವರು ವಿದ್ಯಾರ್ಥಿನಿಯ ಜೊತೆ ನಡೆಸಿದ್ದಾರೆನ್ನಲಾದ ಸಂಭಾಷಣೆಯ ಆಡಿಯೋ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. 

ಆಡಿಯೋದಲ್ಲಿ ವಿದ್ಯಾರ್ಥಿನಿಯು ಪ್ರಾಧ್ಯಾಪಕರಿಗೆ, “ಸರ್, ನಾನು ಓದಿದ್ದೇನೆ ಮತ್ತು ಸಿಲಬಸ್ ಮುಗಿಸಿದ್ದೇನೆ” ಎಂದು ಹೇಳುವ ಮೂಲಕ ತನಗೆ ಲೀಕ್ ಆದ ಪ್ರಶ್ನೆ ಪತ್ರಿಕೆಗಳ ಅಗತ್ಯವಿಲ್ಲ ಎಂದು ಸೂಚಿಸುತ್ತಾಳೆ. ಅದಕ್ಕೆ ಪ್ರಾಧ್ಯಾಪಕರು, “ಹಾಗಾದರೆ ನೀನು ನನ್ನನ್ನು ಒಮ್ಮೆಯೂ ಬಂದು ಭೇಟಿಯಾಗುವುದಿಲ್ಲವೇ?” ಎಂದು ಕೇಳುತ್ತಾರೆ. nಂತರ “ಪ್ರಯತ್ನಿಸಬೇಡ, ಪರೀಕ್ಷೆಗಿಂತ ಮುಂಚಿತವಾಗಿ, ಏಳು ದಿನಗಳ ಒಳಗಾಗಿ ಬಂದು ಭೇಟಿಯಾಗು” ಎಂದು ಹೇಳಿರುವುದು ಕೇಳಿಬಂದಿದೆ. ‘ನಿನಗಾಗಿ ಲೀಕ್ ಆದ ಪ್ರಶ್ನೆ ಪತ್ರಿಕೆಗಳಿವೆ’ ಎಂಬ ಮಾತುಗಳೂ ಆಡಿಯೋದಲ್ಲಿವೆ.

ದೂರು ಮತ್ತು ಕ್ರಮ

ವಿದ್ಯಾರ್ಥಿನಿಯು ಈ ಆಡಿಯೋ ರೆಕಾರ್ಡಿಂಗ್‌ಗಳನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಸಲ್ಲಿಸಿದ ತಕ್ಷಣ, ಪರೀಕ್ಷಾ ನಿಯಂತ್ರಕರು ಅಧಿಕೃತ ದೂರು ದಾಖಲಿಸಿದ್ದಾರೆ. ಕಿರುಕುಳ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳ ತನಿಖೆಗಾಗಿ ವಿಶ್ವವಿದ್ಯಾಲಯವು ಸಮಿತಿಯೊಂದನ್ನು ರಚಿಸಿದೆ.

ಪೊಲೀಸ್ ವಶಕ್ಕೆ ಪ್ರಾಧ್ಯಾಪಕ

ವೈರಲ್ ಆಡಿಯೋ ಬೆನ್ನಲ್ಲೇ ಪೊಲೀಸರು ಪ್ರಾಧ್ಯಾಪಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆಡಿಯೋದ ಸತ್ಯಾಸತ್ಯತೆ ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಿತೂರಿ ಎಂದ ಪ್ರಾಧ್ಯಾಪಕ

ಡಾ. ಪರಮ್‌ಜೀತ್ ಸಿಂಗ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ವಿಶ್ವವಿದ್ಯಾಲಯದ ಒಳಗಿನ “ಆಂತರಿಕ ರಾಜಕೀಯ” ದಿಂದಾಗಿ ತಮ್ಮನ್ನು ಗುರಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ತಾವು ನಿರಪರಾಧಿ ಎಂದು ಪ್ರತಿಪಾದಿಸಿರುವ ಅವರು, ಆಡಿಯೋ ಕ್ಲಿಪ್ ಕೃತಕವಾಗಿ ಸೃಷ್ಟಿಸಲಾಗಿದೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

ಎಬಿವಿಪಿ ಪ್ರತಿಭಟನೆ ಮತ್ತು ಆಗ್ರಹ

ಈ ವಿವಾದವು ವಿಶ್ವವಿದ್ಯಾಲಯದ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರ ಪ್ರತಿಭಟನೆಗೆ ಕಾರಣವಾಗಿದೆ. ಪ್ರಾಧ್ಯಾಪಕನ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿರುವ ವಿದ್ಯಾರ್ಥಿ ಸಂಘಟನೆಯು, ಆತನನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಪವಿತ್ರವಾದ “ಗುರು-ಶಿಷ್ಯ ಪರಂಪರೆ”ಗೆ ಕಳಂಕ ತರುತ್ತಿರುವವರನ್ನು ಬಿಡಬಾರದು ಎಂದು ಎಬಿವಿಪಿ ಯುನಿಟ್ ಅಧ್ಯಕ್ಷ ಜೈ ಶ್ರೀವಾಸ್ತವ ಹೇಳಿದ್ದಾರೆ. ಶೀಘ್ರ ಕ್ರಮ ಕೈಗೊಳ್ಳದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.

Exit mobile version