ಸಾಕುನಾಯಿಯ ಅನಾರೋಗ್ಯಕ್ಕೆ ಮನನೊಂದು ಸಹೋದರಿಯರಿಬ್ಬರು ಆತ್ಮಹ*ತ್ಯೆ!

Untitled design 2025 12 26T145033.177

ಇಬ್ಬರು ಸಹೋದರಿಯರು, ತಮ್ಮ ಪ್ರೀತಿಯ ಸಾಕುನಾಯಿಯ ಅನಾರೋಗ್ಯವನ್ನು ಸಹಿಸಲಾರದೆ ಆತ್ಮಹತ್ಯೆಯ ದಾರಿ ಹಿಡಿದ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ದೀರ್ಘಕಾಲದ ಖಿನ್ನತೆ ಮತ್ತು ನಾಯಿಯ ಮೇಲಿನ ಅತಿಯಾದ ಪ್ರೀತಿಯಿಂದ ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಕ್ನೋದ ದೌಡಾ ಪ್ರದೇಶದ ನಿವಾಸಿಗಳಾದ ರಾಧಾ ಸಿಂಗ್ ಮತ್ತು ಜಿಯಾ ಸಿಂಗ್ ಎಂಬ ಸಹೋದರಿರು ಈ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರೂ ವಿದ್ಯಾವಂತರಾಗಿದ್ದು, ಪದವಿ ಪೂರೈಸಿದ್ದಾರೆ. ಆದರೆ,  2014ರಿಂದಲೇ ಇಬ್ಬರೂ ತೀವ್ರತರವಾದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಹತ್ತು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರೂ, ಯಾವುದೇ ಚೇತರಿಕೆ ಕಂಡಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರ ಮನೆಯಲ್ಲಿದ್ದ ಸಾಕುನಾಯಿ ಅವರಿಗೆ ದೊಡ್ಡ ಆಸರೆಯಾಗಿತ್ತು.

ಕಳೆದ ಕೆಲವು ದಿನಗಳಿಂದ ಈ ಸಹೋದರಿಯರ ಪ್ರೀತಿಯ ಸಾಕುನಾಯಿ ತೀವ್ರವಾಗಿ ಅಸ್ವಸ್ಥಗೊಂಡಿತ್ತು. ದಿನದಿಂದ ದಿನಕ್ಕೆ ನಾಯಿಯ ಸ್ಥಿತಿ ಹದಗೆಡುತ್ತಿರುವುದನ್ನು ಕಂಡು ಈ ಸೋದರಿಯರು ಮಾನಸಿಕವಾಗಿ ಜರ್ಜರಿತರಾಗಿದ್ದರು. ನಾಯಿ ಗುಣಮುಖವಾಗುವ ಯಾವುದೇ ಲಕ್ಷಣಗಳು ಕಾಣದಿದ್ದಾಗ, ಇಬ್ಬರೂ ತೀವ್ರ ಮನನೊಂದಿದ್ದರು. ಈಗಾಗಲೇ ಖಿನ್ನತೆಯಲ್ಲಿದ್ದ ಅವರಿಗೆ ಇದು ಹೆಚ್ಚು ಆಘಾತವಾಗಿತ್ತು.

ಬುಧವಾರ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಇವರ ತಾಯಿ ಗುಲಾಬ್ ದೇವಿ ಅವರು ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ತರಲು ಇಬ್ಬರನ್ನೂ ಅಂಗಡಿಗೆ ಕಳುಹಿಸಿದ್ದರು. ಸಾಮಾನು ತರಲು ಹೋದವರು ಹತಾಶೆಯಿಂದ ಫಿನಾಯಿಲ್ ಸೇವಿಸಿ ಮನೆಗೆ ಮರಳಿದ್ದಾರೆ. ತಾಯಿಯ ಮುಂದೆ ಬಂದು ನಾವು ಫಿನಾಯಿಲ್ ಕುಡಿದಿದ್ದೇವೆ ಎಂದಿದ್ದಾರೆ. ಕೂಡಲೇ ಮಗನನ್ನು ಕರೆಸಿ, ಇಬ್ಬರನ್ನೂ ರಾಣಿ ಲಕ್ಷ್ಮಿಬಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋದ ಟ್ರಾಮಾ ಸೆಂಟರ್‌ಗೆ ಸ್ಥಳಾಂತರಿಸಲಾಯಿತು. ದುರದೃಷ್ಟವಶಾತ್, ರಾಧಾ ಸಿಂಗ್ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರು. ಜಿಯಾ ಸಿಂಗ್ ಚಿಕಿತ್ಸೆಗೆ ಸ್ಪಂದಿಸದೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಮೃತದೇಹಗಳನ್ನು ರವಾನಿಸಿದ್ದಾರೆ.

ಸಾಕುಪ್ರಾಣಿಗಳು ಮನೆಯ ಸದಸ್ಯರಿದ್ದಂತೆ ನಿಜ, ಆದರೆ ಅವುಗಳ ಮೇಲಿನ ಅತೀವ ಅವಲಂಬನೆ ಮಾನಸಿಕವಾಗಿ ದುರ್ಬಲರಾದವರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಖಿನ್ನತೆಯಿಂದ ಬಳಲುತ್ತಿರುವವರ ಬಗ್ಗೆ ಕುಟುಂಬಸ್ಥರು ಸದಾ ನಿಗಾ ಇಡುವುದು ಅನಿವಾರ್ಯ. ಮನೆಯಲ್ಲಿ ಮಾನಸಿಕ ಅಸ್ವಸ್ತರು ಇದ್ದರೆ ಅವರ ಬಗ್ಗೆ ಅತೀವ ಕಾಳಜಿವಹಿಸಿ ಅಥವಾ ಹೆಚ್ಚಿನ ಸಹಾಯಕ್ಕಾಗಿ ಸ್ಥಳೀಯ ಚಿಕಿತ್ಸಾಲಕ್ಕೆ ಭೇಟಿ ಮಾಡಿ, ಚಿಕಿತ್ಸೆ ಪಡೆಯಿರಿ.

Exit mobile version