ಕಾಮಿಡಿಯನ್ ಕುನಾಲ್ ಕಮ್ರಾ ಸ್ಟುಡಿಯೋ ಧ್ವಂಸ : ಶಿವಸೇನೆ ಕಾರ್ಯಕರ್ತರ ಬಂಧನ

Untitled design 2025 03 24t152932.490

ಕುನಾಲ್ ಕಮ್ರಾ. ಒಬ್ಬ ಸ್ಟಾಂಡಪ್ ಕಮೆಡಿಯನ್. ಈಗ ಈತನ ಸ್ಟುಡಿಯೋವನ್ನ ಶಿವಸೇನೆ ಕಾರ್ಯಕರ್ತರು ಧ್ವಂಸ ಮಾಡಿದ್ದಾರೆ. ಇಷ್ಟಕ್ಕೂ ಕುನಾಲ್ ಕಮ್ರಾ ಮಾಡಿದ್ದೇನೆಂದರೆ, ಇತ್ತೀಚಿನ ಕಾಮಿಡಿ ಶೋವೊಂದರಲ್ಲಿ ಮಹಾರಾಷ್ಟ್ರದ ಮಾಜಿ ಸಿಎಂ, ಹಾಲಿ ಡಿಸಿಎಂ ಏಕನಾಥ್ ಶಿಂಧೆ ಅವರನ್ನ ಗದ್ದಾರ್ ಅಂದ್ರೆ, ದ್ರೋಹಿ, ಬೆನ್ನಿಗೆ ಚೂರಿ ಹಾಕಿದವನು ಅಂತಾ ಹೇಳಿದ್ದು. ದಿಲ್ ತೋ ಪಾಗಲ್ ಹೈ ಚಿತ್ರದ ..ಭೂಲಿ ಸೆ ಸೂರತ್.. ಅನ್ನೋ ಹಾಡನ್ನ ರೀಮಿಕ್ಸ್ ಸಾಹಿತ್ಯ ಮಾಡಿ, ಹಾಡಿನಲ್ಲಿ ಏಕನಾಥ್ ಶಿಂಧೆ ಅವರನ್ನ ಗದ್ದಾರ್ ಅಂತಾ ಸಂಭೋದಿಸ್ತಾರೆ.

ಉದ್ಧವ್ ಠಾಕ್ರೆ ಬೆನ್ನಿಗೆ ಚೂರಿ ಹಾಕಿ, ಶಿವಸೇನೆಯನ್ನು ಇಬ್ಭಾಗ ಮಾಡಿ, ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದನ್ನು ನೆನಪಿಸ್ತಾರೆ. ಇದಕ್ಕೆ ರೊಚ್ಚಿಗೆದ್ದ ಶಿವಸೇನೆ ಕಾರ್ಯಕರ್ತರು, ಕುನಾಲ್ ಕಮ್ರಾ ಸ್ಟುಡಿಯೋವನ್ನ ಧ್ವಂಸ ಮಾಡಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಗೆದ್ದು, ಬಿಜೆಪಿಯನ್ನು ಬಿಟ್ಟು, ಕಾಂಗ್ರೆಸ್ ಜೊತೆ ಹೋಗಿ ಸರ್ಕಾರ ಮಾಡಿದವರು ದ್ರೋಹಿ, ಶಿಂಧೆ ಅಲ್ಲ ಅನ್ನೋದು ಅವರ ವಾದ. ಅಂದಹಾಗೆ ಈಗ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿ ಸರ್ಕಾರ ಇದೆ. ಈ ಗಲಾಟೆ ಈ ಹಿಂದಿನ ಸರ್ಕಾರದ್ದು.

ಅಂದಹಾಗೆ ಕುನಾಲ್ ಕಮ್ರಾ ವಿಚಾರಕ್ಕೆ ಬರೋದಾದ್ರೆ, ಇವರು ಸ್ಟಾಂಡಪ್ ಕಮೆಡಿಯನ್. ಎಡ ಪಂಥಕ್ಕೆ ಸೇರಿದ, ಕಾಂಗ್ರೆಸ್ ಬೆಂಬಲಿಸುವ ಸೆಲಬ್ರಿಟಿಗಳಲ್ಲಿ ಒಬ್ಬರು. ಶಟಪ್ ಕುನಾಲ್ ಅನ್ನೋ ಯೂಟ್ಯೂಬ್ ಚಾನೆಲ್ ಇದೆ. ಅರ್ನಾಬ್ ಗೋಸ್ವಾಮಿ ಜೊತೆ ವಿಮಾನದಲ್ಲಿ ಜಗಳ ಮಾಡಿಕೊಂಡು ಪ್ರಸಿದ್ಧಿಗೆ ಬಂದ ಕುನಾಲ್ ಕಮ್ರಾ, ಇಂಡಿಯೋ ಏರ್ ಲೈನ್ಸ್‌ನಲ್ಲಿ ಬ್ಯಾನ್ ಕೂಡಾ ಆಗಿದ್ದರು. ಆನಂತರ ಕುಮ್ರಾ, ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿ ನ್ಯಾಯಾಂಗ ನಿಂದನೆಗೂ ಗುರಿಯಾಗಿದ್ದರು. ಬಿಜೆಪಿ ಹಾಗೂ ಹಿಂದುತ್ವ ವಿರೋಧಿ ಕಾಮಿಡಿಗಳಿಗಾಗಿ ಹಲವು ಬಾರಿ ವಿರೋಧ ಎದುರಿಸಿದ್ದಾರೆ.

ಇನ್ನು ಸಲ್ಮಾನ್ ಖಾನ್ ಬಗ್ಗೆ ಲೇವಡಿ ಮಾಡಿದ್ದು, ಓಲಾ ಕಂಪೆನಿಯನ್ನು ಟೀಕಿಸಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮಧ್ಯದ ಬೆರಳು ತೋರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಜರ್ಮನಿ ಪ್ರವಾಸಕ್ಕೆ ಹೋಗಿದ್ಧಾಗ ಪುಟ್ಟ ಬಾಲಕನೊಬ್ಬನ ಜೊತೆ ಇದ್ದ ವಿಡಿಯೋವನ್ನು ಲೈಂಗಿಕ ವಿಕೃತಿ ಎಂಬಂತೆ ಬಿಂಬಿಸಿದ್ದು, ಸುಪ್ರೀಂ ಕೋರ್ಟ್‌ ಬಗ್ಗೆ ಹಲವು ಅವಹೇಳನಕಾರಿ ಟೀಕೆಗಳಿಗೆ ಸಂಬಂಧಪಟ್ಟಂತೆ ಕೇಸು ಎದುರಿಸಿದ್ಧಾರೆ.

ಇದೀಗ ಮತ್ತೊಮ್ಮೆ ಏಕ್ ನಾಥ ಶಿಂಧೆ ಅವರನ್ನು ದ್ರೋಹಿ, ಗದ್ದಾರ್ ಎಂದು ಸಂಭೋದಿಸಿರುವುದು ಕೂಡಾ ವಿವಾದಕ್ಕೆ ಕಾರಣವಾಗಿದೆ. ಮುಂಬೈನ ಕಮ್ರಾ ಮಾಲೀಕತ್ವದ ಸ್ಟುಡಿಯೋವನ್ನು ಶಿವಸೇನೆ ಕಾರ್ಯಕರ್ತರು ಧ್ವಂಸ ಮಾಡಿದ್ದು, 12ಕ್ಕೂ ಶಿವಸೇನೆ ಕಾರ್ಯಕರ್ತರನ್ನು ಅರೆಸ್ಟ್ ಮಾಡಲಾಗಿದೆ.

ವಾಕ್ ಮತ್ತು ಅಭಿವೃಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದನ್ನು ಸಂವಿಧಾನದ ಹೆಸರಲ್ಲಿ ಬಾಯಿಗೆ ಬಂದಂತೆ ಬಳಸಬಾರದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಹಾಸ್ಯ.. ಅಪಹಾಸ್ಯವಾಗಿದೆ.

Exit mobile version