ಶ್ರೀನಗರ/ಇಸ್ಲಾಮಾಬಾದ್/ಟೆಹ್ರಾನ್: ಇರಾನ್ ನ ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರು ಇಸ್ರೇಲ್ ಮತ್ತು ಅಮೆರಿಕ ಸಂಯುಕ್ತ ದಾಳಿಯಲ್ಲಿ ಹತ್ಯೆಯಾಗಿದ್ದು, ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಇರಾನ್ ಸೇರಿದಂತೆ ವಿಶ್ವದಾದ್ಯಂತದ ಇರಾನಿಯನ್ನರು ಎರಡು ವಿರುದ್ಧ ಗುಂಪುಗಳಾಗಿ ವಿಂಗಡನೆಯಾಗಿದ್ದಾರೆ. ಒಂದೆಡೆ ಮಹಿಳೆಯರು ಬೀದಿಗಿಳಿದು ಸಂಭ್ರಮಾಚರಣೆ ನಡೆಸುತ್ತಿದ್ದರೆ, ಇನ್ನೊಂದೆಡೆ ಇರಾನ್ ನ ಅನುಯಾಯಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇರಾನ್ ನಲ್ಲಿ ಮಹಿಳೆಯರ ಸಂಭ್ರಮ: ಏಕೆ?
ಖಮೇನಿ ಆಡಳಿತದಲ್ಲಿ ಮಹಿಳೆಯರು ತೀವ್ರ ಸ್ವಾತಂತ್ರ್ಯದ ಕೊರತೆಯನ್ನು ಅನುಭವಿಸಿದ್ದರು. ಕಡ್ಡಾಯ ಹಿಜಾಬ್, ಮಹಿಳೆಯರ ಮೇಲಿನ ನಿರ್ಬಂಧಗಳು ಮತ್ತು ನೈತಿಕ ಪೊಲೀಸರ ದೌರ್ಜನ್ಯದಿಂದ ಬೇಸತ್ತಿದ್ದ ಇರಾನಿಯನ್ನರು, ವಿಶೇಷವಾಗಿ ಮಹಿಳೆಯರು, ಖಮೇನಿ ಸಾವಿನ ಸುದ್ದಿ ಕೇಳುತ್ತಿದ್ದಂತೆ ರಸ್ತೆಗಿಳಿದು ನೃತ್ಯ ಮಾಡಿದ್ದಾರೆ. ಟೆಹ್ರಾನ್, ಶಿರಾಜ್, ಇಸ್ಫಹಾನ್, ಮತ್ತು ಮಮಸಾನಿ ಸೇರಿದಂತೆ ಹಲವು ನಗರಗಳಲ್ಲಿ ಮಹಿಳೆಯರು ತಮ್ಮ ತಲೆಯ ಮೇಲಿನ ಹಿಜಾಬ್ ಗಳನ್ನು ತೆಗೆದು ಎಸೆದು, “ಮಹಿಳೆ, ಜೀವನ, ಸ್ವಾತಂತ್ರ್ಯ” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಪಟಾಕಿ ಸಿಡಿಸುವ ಮೂಲಕ ಮತ್ತು ಕಾರ್ ಹಾರ್ನ್ ಮೊಳಗಿಸುವ ಮೂಲಕ ಅವರು ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹಲವು ಯುವತಿಯರು “ನಮ್ಮ 40 ವರ್ಷಗಳ ದಬ್ಬಾಳಿಕೆ ಕೊನೆಗೊಂಡಿತು” ಎಂದು ಸಂಭ್ರಮಿಸಿದ್ದಾರೆ.
ಈ ಸಂಭ್ರಮ ಇರಾನ್ ನ ಜನರಿಗೆ ಮಾತ್ರ ಸೀಮಿತವಾಗಿಲ್ಲ. ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಇರಾನ್ ಮೂಲದವರು ಜಮಾಯಿಸಿ ಬೃಹತ್ ರ್ಯಾಲಿ ನಡೆಸಿದ್ದಾರೆ. ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್, ಲಂಡನ್, ಟೊರೊಂಟೊ ಮತ್ತು ಮ್ಯೂನಿಚ್ ನಲ್ಲೂ ಇದೇ ರೀತಿಯ ಸಂಭ್ರಮಾಚರಣೆಗಳು ನಡೆದಿವೆ. ಅಲ್ಲಿನ ಇರಾನಿಯನ್ನರು ಇರಾನ್, ಅಮೆರಿಕ ಮತ್ತು ಇಸ್ರೇಲ್ ಧ್ವಜಗಳನ್ನು ಹಿಡಿದು “ಖಮೇನಿ ಗೆಟ್ಟಿಂಗ್ ಔಟ್” ಎಂಬ ಘೋಷಣೆ ಕೂಗಿದ್ದಾರೆ.
ಇರಾಕ್ ನಲ್ಲಿ ಭುಗಿಲೆದ್ದ ಪ್ರತಿಭಟನೆ
ಇನ್ನೊಂದೆಡೆ, ಖಮೇನಿ ಹತ್ಯೆಗೆ ಇರಾಕ್, ಪಾಕಿಸ್ತಾನ ಮತ್ತು ಭಾರತದ ಕಾಶ್ಮೀರ ಸೇರಿದಂತೆ ಹಲವು ಮುಸ್ಲಿಂ ಪ್ರದೇಶಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇರಾಕ್ ನ ಬಾಗ್ದಾದ್ ನಲ್ಲಿ ಸಾವಿರಾರು ಜನರು ಅಮೆರಿಕದ ರಾಯಭಾರ ಕಚೇರಿಯತ್ತ ನುಗ್ಗಲು ಯತ್ನಿಸಿದ್ದಾರೆ. ಗ್ರೀನ್ ಝೋನ್ ನಲ್ಲಿ ಭದ್ರತಾ ಪಡೆಗಳೊಂದಿಗೆ ಘರ್ಷಣೆ ನಡೆಸಿದ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಪಾಕಿಸ್ತಾನದಲ್ಲಿ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ
ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕದ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನಾಕಾರರು ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದಾರೆ.. ಪಾಕಿಸ್ತಾನದ ಸರ್ಕಾರ ರಾಯಭಾರ ಕಚೇರಿಯ ಸುತ್ತಲೂ ಹೆಚ್ಚುವರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಿದೆ.
ಕಾಶ್ಮೀರದಲ್ಲಿ ಪ್ರತಿಭಟನೆ ಏಕೆ?
ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಭಾಗಗಳಲ್ಲಿ ಖಮೇನಿ ಹತ್ಯೆಗೆ ತೀವ್ರ ಪ್ರತಿಭಟನೆಗಳು ವ್ಯಕ್ತವಾಗಿವೆ. ಶುಕ್ರವಾರದ ವಿಶೇಷ ಪ್ರಾರ್ಥನೆಯ ಬಳಿಕ ಸಾವಿರಾರು ಜನರು ರಸ್ತೆಗಿಳಿದು, ಅಮೆರಿಕ ಮತ್ತು ಇಸ್ರೇಲ್ ವಿರೋಧಿ ಘೋಷಣೆಗಳನ್ನು ಕೂಗಿದರು. ಕೆಲವೆಡೆ ಪ್ರತಿಭಟನಾಕಾರರು ಇರಾನ್ ನ ಧ್ವಜಗಳನ್ನು ಹಿಡಿದು ಖಮೇನಿ ಭಾವಚಿತ್ರಗಳನ್ನು ಪ್ರದರ್ಶಿಸಿದರು. ಕಾಶ್ಮೀರದ ಅನೇಕ ಸಂಘಟನೆಗಳು ಈ ದಾಳಿಯನ್ನು ಖಂಡಿಸಿ ಹೇಳಿಕೆ ನೀಡಿವೆ.
