‘ಸಿಯಾ ಪಾಯಿಂಟ್’: ಲೋಹಗಡ ಕೋಟೆಗೆ ಹೆಚ್ಚಿದ ಪ್ರವಾಸಿಗರು!

Untitled design 2026 06 30T194027.861

ಪುಣೆ (ಜೂನ್ 30): ಮಹಾರಾಷ್ಟ್ರದ ಪುಣೆ ಸಮೀಪದ ಐತಿಹಾಸಿಕ ಲೋಹಗಡ ಕೋಟೆಯು, ಮರಾಠಾ ಪರಂಪರೆ ಮತ್ತು ರಮಣೀಯ ಮಳೆಗಾಲದ ಚಾರಣಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇತ್ತೀಚಿನ ಹತ್ಯೆ ಪ್ರಕರಣದ ಬಳಿಕ ಮತ್ತೊಮ್ಮೆ ಈ ಕೋಟೆ ಸುದ್ದಿಯಲ್ಲಿದೆ. ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಸಾವಿನ ಪ್ರಕರಣ ರಾಷ್ಟ್ರದ ಗಮನ ಸೆಳೆದ ಬೆನ್ನಲ್ಲೇ, ಘಟನೆ ನಡೆದ ಸ್ಥಳವನ್ನು ನೋಡಲು ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಸ್ಥಳೀಯರು ಹಾಗೂ ಪ್ರವಾಸೋದ್ಯಮ ವಲಯದವರು ತಿಳಿಸಿದ್ದಾರೆ.

ಜೂನ್ 18ರಂದು 26 ವರ್ಷದ ಕೇತನ್ ಅಗರ್ವಾಲ್ ಲೋಹಗಡ ಕೋಟೆಯ ಸುಮಾರು 350 ಅಡಿ ಆಳದ ಕಣಿವೆಗೆ ಬಿದ್ದು ಮೃತಪಟ್ಟಿದ್ದರು. ಆರಂಭದಲ್ಲಿ ಈ ಘಟನೆ ಅಪಘಾತ ಎಂದು ಶಂಕಿಸಲಾಗಿತ್ತು. ಆದರೆ ನಂತರದ ಪೊಲೀಸ್ ತನಿಖೆಯಲ್ಲಿ ಇದು ಕೊಲೆ ಪ್ರಕರಣ ಎಂಬ ಅನುಮಾನ ವ್ಯಕ್ತವಾಗಿದ್ದು, ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಚೇತನ್ ಚೌಧರಿ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಾಗಿರುವುದು ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಇನ್ನೂ ಮುಂದುವರಿಸಿದ್ದಾರೆ.

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಲೋಹಗಡ ಕೋಟೆಗೆ ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ನಡೆದ ಸ್ಥಳವನ್ನು ನೋಡಲು ಅನೇಕರು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವು ಪ್ರವಾಸಿಗರು ಆ ಸ್ಥಳವನ್ನು “ಸಿಯಾ ಪಾಯಿಂಟ್” ಎಂದು ಕರೆಯುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಲೋಹಗಡ–ವಿಸಾಪುರ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಸಚಿನ್ ಟೆಕವಾಡೆ ಅವರ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಕೋಟೆಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ. ಸಾಮಾನ್ಯವಾಗಿ ಮಳೆಗಾಲದ ವಾರಾಂತ್ಯಗಳಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದರು. ಆದರೆ ಈ ಬಾರಿ ಮಳೆಯ ಕೊರತೆಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಹತ್ಯೆ ಪ್ರಕರಣದ ಸುದ್ದಿಯಿಂದ ಜನರು ಮತ್ತೆ ಕೋಟೆಯತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ಕೇತನ್ ಅವರನ್ನು ಹತ್ಯೆಗೈದ ಬಂಡೆಯನ್ನು ನೋಡಲು ಜನ ಮುಗಿಬಿಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕೋಟೆಯ ಸಿಬ್ಬಂದಿಯೂ ಅನೇಕ ಪ್ರವಾಸಿಗರು ನೇರವಾಗಿ ಘಟನೆ ನಡೆದ ಸ್ಥಳದ ಬಗ್ಗೆ ವಿಚಾರಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ ಐತಿಹಾಸಿಕ ತಾಣಕ್ಕೆ ಭೇಟಿ ನೀಡುವ ವೇಳೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಸುಮಾರು 3,389 ಅಡಿ ಎತ್ತರದಲ್ಲಿರುವ ಲೋಹಗಡ ಕೋಟೆ ಮಹಾರಾಷ್ಟ್ರದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಸಾತವಾಹನರು, ಚಾಲುಕ್ಯರು, ಯಾದವರು, ಬಹಮನಿ, ಆದಿಲ್‌ಶಾಹಿ ಹಾಗೂ ಬಳಿಕ ಛತ್ರಪತಿ ಶಿವಾಜಿ ಮಹಾರಾಜರ ಆಳ್ವಿಕೆಯಲ್ಲಿ ಈ ಕೋಟೆ ಮಹತ್ವದ ಸ್ಥಾನ ಪಡೆದಿತ್ತು. ತನ್ನ ಐತಿಹಾಸಿಕ ಹಾಗೂ ಪ್ರವಾಸೋದ್ಯಮದ ಮಹತ್ವದಿಂದ ಈ ಕೋಟೆ ದೇಶ-ವಿದೇಶದ ಪ್ರವಾಸಿಗರನ್ನು ವರ್ಷಪೂರ್ತಿ ಆಕರ್ಷಿಸುತ್ತಿದೆ. 

Exit mobile version