ಮುಂಬೈ (ಜೂನ್ 30): ಮಹಾರಾಷ್ಟ್ರದ ಮುಂಬೈ ನಗರದ ಚೆಂಬೂರ್ ಉಪನಗರದಲ್ಲಿ ಇಂದು ನಡೆದ ಭೀಕರ ಅಪಘಾತ ನಡೆದಿದೆ. ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದ ಪರಿಣಾಮ 11 ವರ್ಷದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮೂವರು ವಿದ್ಯಾರ್ಥಿಗಳು ಹಾಗೂ ಬಸ್ ಚಾಲಕರಿದ್ದು, ಇಬ್ಬರು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- ಶಾಲಾ ಬಸ್ ಮೇಲೆ ಉರುಳಿ ಬಿದ್ದ ಬೃಹತ್ ಮರ
- ಸ್ಥಳದಲ್ಲೇ ಮೃತಪಟ್ಟ 11 ವರ್ಷದ ವಿದ್ಯಾರ್ಥಿ, ನಾಲ್ವರಿಗೆ ಗಾಯ
- ಬಸ್‌ನಲ್ಲಿ ಒಟ್ಟು 18 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು
- ಗಾಯಾಳುಗಳಲ್ಲಿ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ
- BMC ನಿರ್ಲಕ್ಷ್ಯದ ಆರೋಪ; ತನಿಖೆ ಆರಂಭಿಸಿದ ಪೊಲೀಸರು
ಮಾಹಿತಿಯ ಪ್ರಕಾರ, ಚೆಂಬೂರ್‌ನ ಪ್ರಮುಖ ರಸ್ತೆಯೊಂದರಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿಯಲ್ಲಿದ್ದ ಬೃಹತ್ ಮರ ಏಕಾಏಕಿ ಬುಡಸಮೇತ ಉರುಳಿ ಬಸ್ ಮೇಲೆ ಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಬಸ್‌ನಲ್ಲಿ ಒಟ್ಟು 18 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು.
ಮರ ಬಿದ್ದ ರಭಸಕ್ಕೆ ಬಸ್‌ನ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಹಲವು ವಿದ್ಯಾರ್ಥಿಗಳು ಬಸ್ ಒಳಗೆ ಸಿಲುಕಿಕೊಂಡಿದ್ದರು. ಮರ ಬಿದ್ದ ಸ್ಥಳದ ಸಮೀಪ ಕುಳಿತಿದ್ದ 11 ವರ್ಷದ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿ, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯ ನಿವಾಸಿಗಳು, ಮುಂಬೈ ಮಹಾನಗರ ಪಾಲಿಕೆ (BMC) ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಸ್‌ನೊಳಗೆ ಸಿಲುಕಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ಮತ್ತು ಬಸ್ ಚಾಲಕರಿಗೆ ಚಿಕಿತ್ಸೆ ಮುಂದುವರಿದಿದ್ದು, ಇಬ್ಬರು ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಘಟನೆಗೆ ಸಂಬಂಧಿಸಿ ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳು ಮುಂಬೈ ಮಹಾನಗರ ಪಾಲಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಗಾರು ಆರಂಭಕ್ಕೂ ಮುನ್ನ ಅಪಾಯಕಾರಿ ಮತ್ತು ದುರ್ಬಲ ಮರಗಳನ್ನು ಗುರುತಿಸಿ ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದೇ ಈ ದುರಂತಕ್ಕೆ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಮತ್ತು ಮರ ಉರುಳಲು ಕಾರಣವಾದ ಅಂಶಗಳ ಕುರಿತು ತನಿಖೆ ಆರಂಭಿಸಲಾಗಿದೆ. ಇದೇ ವೇಳೆ, ಮಳೆಗಾಲದಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿಯಾಗಿರುವ ಮರಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
