ಕೇರಳ: ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ವ್ಯಾನ್ ಒಂದರಲ್ಲಿ ಭಾರೀ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ. ಖಚಿತ ಬೇಹುಗಾರಿಕಾ ಮಾಹಿತಿ ಆಧರಿಸಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೇರಳ ಪೊಲೀಸರು ಈ ಅಕ್ರಮ ಸಾಗಾಟವನ್ನು ಭೇದಿಸಿದ್ದಾರೆ. ಕಲ್ಲಂಗಡಿ ಹಣ್ಣು ತುಂಬಿರುವಂತೆ ಕಂಡುಬಂದ ಚೀಲಗಳ ಒಳಗೆ ಸುಮಾರು 18 ಸಾವಿರ ಜಿಲೆಟಿನ್ ಕಡ್ಡಿಗಳು ಹಾಗೂ 4,800 ಡಿಟೋನೇಟರ್‌ಗಳು ಪತ್ತೆಯಾಗಿವೆ.
ಮೂಲಗಳ ಪ್ರಕಾರ, ತಮಿಳುನಾಡಿನಿಂದ ಕೇರಳದ ತ್ರಿಶ್ಯೂರ್ ಜಿಲ್ಲೆಗೆ ತೆರಳುತ್ತಿದ್ದ ವ್ಯಾನ್ ಮೇಲೆ ಅನುಮಾನ ವ್ಯಕ್ತವಾಗಿತ್ತು. ಖಚಿತ ಗುಪ್ತಚರ ಮಾಹಿತಿ ಲಭಿಸಿದ ಹಿನ್ನೆಲೆ ಪಾಲಕ್ಕಾಡ್ ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸರು ವಾಹನ ತಡೆದು ಪರಿಶೀಲನೆ ನಡೆಸಲು ಮುಂದಾದರು. ಆದರೆ ವಾಹನ ಚಾಲಕ ಮೊದಲಿಗೆ ಪೊಲೀಸರ ಸೂಚನೆಗೆ ಸ್ಪಂದಿಸದೆ, ವಾಹನವನ್ನು ನಿಲ್ಲಿಸಲು ನಿರಾಕರಿಸಿ ವೇಗವಾಗಿ ಓಡಿಸಲು ಪ್ರಯತ್ನಿಸಿದ್ದಾನೆ.
ಇದರಿಂದ ಅನುಮಾನ ವ್ಯಕ್ತಪಡಿಸಿದ ಪೊಲೀಸರು ವಾಹನವನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಕೆಲವೇ ದೂರದಲ್ಲಿ ವ್ಯಾನ್ ಅನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ, ಕಲ್ಲಂಗಡಿ ಹಣ್ಣು ತುಂಬಿದಂತೆ ಕಂಡುಬಂದ ಸುಮಾರು 90 ಬಾಕ್ಸ್‌ಗಳ ಒಳಗೆ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ.
ಪತ್ತೆಯಾದ ಸ್ಫೋಟಕಗಳಲ್ಲಿ ಜಿಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್‌ಗಳು ಸೇರಿದ್ದು, ಇವು ಸಾಮಾನ್ಯವಾಗಿ ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ಚಟುವಟಿಕೆಗಳಿಗೆ ಬಳಸುವ ವಸ್ತುಗಳಾಗಿವೆ. ಆದರೆ ಅಗತ್ಯ ಪರವಾನಗಿ ಇಲ್ಲದೆ, ಇಷ್ಟೊಂದು ಪ್ರಮಾಣದಲ್ಲಿ ಕದ್ದು ಮಚ್ಚಿ ಸಾಗಾಟ ನಡೆಸಿರುವುದು ಗಂಭೀರ ಅಪರಾಧ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಫೋಟಕಗಳನ್ನು ನಿಜಕ್ಕೂ ಕ್ವಾರಿಗೆ ಬಳಸಲಾಗುತ್ತಿತ್ತೋ, ಅಥವಾ ಬೇರೆ ಯಾವುದೇ ದುರುದ್ದೇಶ ಇದೆಯೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ಈ ಪ್ರಕರಣದ ತನಿಖೆಯನ್ನು ಭಯೋತ್ಪಾದನಾ ನಿಗ್ರಹ ದಳ (ATS) ಕೈಗೆತ್ತಿಕೊಂಡಿದೆ. ಸ್ಫೋಟಕಗಳ ಮೂಲ, ಸಾಗಾಟದ ಉದ್ದೇಶ, ಹಿಂದೆ ಯಾರು ಇದ್ದಾರೆ, ಇವುಗಳನ್ನು ಯಾರಿಗೆ ತಲುಪಿಸಲು ಯೋಜನೆ ರೂಪಿಸಲಾಗಿತ್ತು ಎಂಬ ಎಲ್ಲಾ ಅಂಶಗಳನ್ನು ತನಿಖಾಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ.
